ಅಥಣಿ(ಬೆಳಗಾವಿ): ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ನನಗೆ ಮಾಹಿತಿಯಿಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹಗಲುಗನಸು ಕಾಣುವ ವ್ಯಕ್ತಿ ನಾನಲ್ಲ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತು. ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಅವರು ಕಾರ್ಯ ಮಾಡುತ್ತಾರೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ ಎಂದರು.
ಬೊಮ್ಮಾಯಿ ಅವರು ಸಿಎಂ ಆಗಿ ಈ ಅವಧಿಯನ್ನು ಪೂರ್ಣ ಮಾಡಲಿ ಎಂದು ಬಯಸುತ್ತೇನೆ. ಬಿಜೆಪಿ ರಾಷ್ಟ್ರೀಯ ಪಕ್ಷ, ಅಳೆದು ತೂಗಿ ದೂರದೃಷ್ಟಿಯನ್ನು ಇಟ್ಟುಕೊಂಡು ವಿಚಾರ ಮಾಡುವ ಪಕ್ಷ. ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಯಾರನ್ನು ಉಪಮುಖ್ಯಮಂತ್ರಿ ಮಾಡಬೇಕು, ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬುದನ್ನು ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ ಎಂದು ಹೇಳಿದರು.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ. ಸದ್ಯ ಕಾಂಗ್ರೆಸ್ ಪರಿಸ್ಥಿತಿ ತೀನ್ ತೇರಾ, ನೌವ್ ಅಟ್ರಾ ಆಗಿದೆ. ದೀಪದ ಎಣ್ಣೆ ಮುಗಿದಿದೆ. ಎಣ್ಣೆ ಮುಗಿದ ಮೇಲೆ ದೀಪ ಆರಬೇಕು. ಎಲ್ಲದಕ್ಕೂ ಒಂದು ಆಯಸ್ಸು ಇರುತ್ತದೆ. ಕಾಂಗ್ರೆಸ್ ಆಯಸ್ಸು ಮುಗಿದಿದೆ. ಜನರೇ ಕಾಂಗ್ರೆಸ್ ಪಕ್ಷದ ದೀಪ ಆರಿಸುತ್ತಿದ್ದಾರೆ ಎಂದು ಸವದಿ ವ್ಯಂಗ್ಯವಾಡಿದರು.
ಓದಿ; ಕಾಂಗ್ರೆಸ್ ಮುಳುಗುತ್ತಿರುವ ಹಡಗು.. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಗ್ಗೆ ಸಿ.ಎಂ. ಇಬ್ರಾಹಿಂ ಅಧಿಕೃತ ಮಾಹಿತಿ