ಬೆಳಗಾವಿ : ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ ಚಡ್ಡಿ ಉದುರಿಸಿದ್ದೇವೆ ಅಂತಾರೆ. ಚಡ್ಡಿ ಬಿಚ್ಚಿದ್ರೆ ಏನ್ ಸಿಗುತ್ತದೆ. ನಿಮ್ಮ ನಿಮ್ಮ ಚಡ್ಡಿ ನೀವು ಉದುರಿಸಿಕೊಳ್ಳಿ. ರಾಜ್ಯದ ಜನರ ಚಡ್ಡಿ ಉದುರಿಸಲು ಹೋಗಬೇಡಿ. ರಾಜ್ಯದ ಜನತೆ ಗೌರವವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಿಕೊಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಆರ್ಎಸ್ಎಸ್ ಚಡ್ಡಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ಭೇಟಿಗೆ ಟೈಂ ತೆಗೆದುಕೊಳ್ಳಲು ಆಗೋದಿಲ್ಲ. ದೆಹಲಿಗೆ ಹೋಗ್ತಾರೆ, ಖಾಲಿ ಕೈಯಲ್ಲಿ ವಾಪಸ್ ಬರ್ತಾರೆ. ಇಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ.
ಮುಖ್ಯಮಂತ್ರಿಗಳಿಗೆ ಗೌರವವೇ ಇಲ್ಲ. ಸಿಎಂ ಅಷ್ಟೇ ಅಲ್ಲ, ಇಡೀ ರಾಜ್ಯದ ಜನರಿಗೆ ಮಾಡಿರೋ ಅವಮಾನ ಇದು. ನವ ಕರ್ನಾಟಕ ನಿರ್ಮಾಣದ ಬಗ್ಗೆ ಸಿಎಂ ಮಾತನಾಡುತ್ತಾರೆ. ಯಾವ ನವ ಕರ್ನಾಟಕ ನಿರ್ಮಾಣ ಮಾಡುತ್ತೀರಿ. ಯಾವ ಕೈಗಾರಿಕೆಗಳು ರಾಜ್ಯಕ್ಕೆ ಬರುತ್ತಿವೆ. ಕೇವಲ ಕಾಗದದ ಮೇಲೆ ಹೇಳಿದ್ರೆ ಆಗೋದಿಲ್ಲ ಎಂದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರವಾಹ ಬಂತು. ನಾನು ಅನೇಕ ಕಡೆಗಳಿಗೆ ಭೇಟಿ ನೀಡಿದ್ದೇನೆ. ಕೈಗಾರಿಕೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಆಗಿದೆ. ಅವರಿಗೆ ಏನು ಪರಿಹಾರ ಕೊಡುತ್ತೀರಿ? ಬೊಮ್ಮಾಯಿ ಸರ್ಕಾರವನ್ನು ಯಾರು ನಿಯಂತ್ರಣ ಮಾಡುತ್ತಾರೆ ಅಂತಾ ಅವರೇ ಹೇಳಬೇಕು. ಸರ್ಕಾರದ ರಿಮೋಟ್ ಕಂಟ್ರೋಲ್ ಬೇರೆಯವರ ಬಳಿ ಇದೆ.
ಅದು ಎಲ್ಲರಿಗೂ ಗೊತ್ತಿದೆ, ನಾನೇನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಾಣದ ಕೈಗಳ ಸರ್ಕಾರ ರಾಜ್ಯದಲ್ಲಿ ನಡೆಯುತ್ತಿದೆ. ಕಾಣದ ಕೈಗಳ ಯಾವುದು ಅಂತಾ ಜನರ ಮುಂದೆ ಬಿಚ್ಚಿಡಲಿ ಎಂದರು. ಜೆಡಿಎಸ್ ಯಾಕೆ ಟಾರ್ಗೆಟ್ ಅಂತಾ ಸಿದ್ದರಾಮಯ್ಯ ಅವರನ್ನು ಕೇಳಿ. ನಾನು ಒಂದು ಬಾರಿ ಬಿಜೆಪಿ ಜೊತೆಗೆ ಸರ್ಕಾರ ಮಾಡಿದೆ. ಬಿಜೆಪಿ ಜತೆಗೆ ನಾನು ಸರ್ಕಾರ ಮಾಡಲು ಸಿದ್ದರಾಮಯ್ಯ ಕಾರಣರಾದರು.
ನಮ್ಮ ಪಕ್ಷದಲ್ಲಿ ಇದ್ದು ಡಿಸಿಎಂ ಆಗಿ ಅಹಿಂದ ಸಮಾವೇಶ ಮಾಡಿದ್ರು. ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿ ಮುಂದುವರೆದಿದ್ದರೇ, ನಾನು ರಾಜ್ಯದ ಮುಖ್ಯಮಂತ್ರಿ ಆಗೋ ಪ್ರಶ್ನೆಯೇ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ರೋ ಇಲ್ವೋ ಗೊತ್ತಿಲ್ಲ. ಆದರೆ, ಈ ಪಕ್ಷದ ಮುಖಂಡರಾಗಿ ಅವರೇ ಇರುತ್ತಿದ್ದರು. ಪಕ್ಷ ಬಿಟ್ಟು ಹೋದವರ ಬಗ್ಗೆ ಯಾಕೆ ಚರ್ಚೆ ಹೋಗ್ಲಿ ಬಿಡಿ ಎಂದು ವ್ಯಂಗ್ಯವಾಗಿ ಮಾತನಾಡಿದರು.
ಇದನ್ನೂ ಓದಿ: ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ?: ಕಾಂಗ್ರೆಸ್ ಟ್ವೀಟೇಟು