ಬೆಳಗಾವಿ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಎರಡೇ ದಿನಕ್ಕೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಮುಗಿಸಿ ಇಂದು ಬೆಳಗಿನ ಜಾವ ಕುಂದಾ ನಗರಿಯಿಂದ ಬೆಂಗಳೂರಿಗೆ ತೆರಳಿದ್ದಾರೆ.
ವಿಧಾನಮಂಡಲ ಉದಯ ಸದನಗಳ ಅಧಿವೇಶನ ಆರಂಭವಾಗಿ ಒಂದು ವಾರ ಕಳೆದ ಬಳಿಕ ಆಗಮಿಸಿದ್ದ ಕುಮಾರಸ್ವಾಮಿ ಕೇವಲ ಎರಡು ದಿನ ಮಾತ್ರ ಕಲಾಪದಲ್ಲಿ ಭಾಗಿಯಾಗಿದ್ದರು. ನಾಳೆಗೆ ಅಧಿವೇಶನ ಮುಕ್ತಾಯಗೊಳ್ಳಲಿದೆ. ಅಧಿವೇಶನ ಇನ್ನೂ ಎರಡು ದಿನ ಇರುವ ಮುನ್ನವೇ ಹೆಚ್ಡಿಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿರುವುದು ಕುತೂಹಲ ಮೂಡಿಸಿದೆ.
ಇಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಮೇಲಿನ ಚರ್ಚೆ ನಡೆಯಲಿದ್ದು, ಕುಮಾರಸ್ವಾಮಿ ಪಾಲ್ಗೊಂಡು ವಿಧೇಯಕದ ಕುರಿತು ತಮ್ಮ ಅಭಿಪ್ರಾಯ ತಿಳಿಸಬೇಕಿತ್ತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಆಗಿರುವ ಹಿನ್ನೆಲೆ ಜೆಡಿಎಸ್ ನಿಲುವನ್ನು ಸದನದಲ್ಲಿ ವ್ಯಕ್ತಪಡಿಸಬೇಕಿತ್ತು. ಆದರೆ ದಿಢೀರ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮೊದಲ ಒಂದು ವಾರದ ಕಲಾಪ ಸಂದರ್ಭ ದಿಲ್ಲಿಯಲ್ಲೇ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ, ಮಂಗಳವಾರ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಿದ್ದರು.
ಮತಾಂತರ ನಿಷೇಧ ಕಾಯ್ದೆ ವಿರೋಧಿಸಿರುವ ಕಾಂಗ್ರೆಸ್ ಪಕ್ಷ, ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ನಡೆಸಿದೆ. ಈ ವಿಚಾರದಲ್ಲಿ ಜೆಡಿಎಸ್ ಪಕ್ಷದ ಹಾಗೂ ಶಾಸಕಾಂಗ ನಾಯಕ ಹೆಚ್ಡಿ ಕುಮಾರಸ್ವಾಮಿ ನಿಲುವು ಇದುವರೆಗೂ ಸ್ಪಷ್ಟವಾಗಿಲ್ಲ. ಇಂದು ಮತಾಂತರ ನಿಷೇಧ ಕಾಯ್ದೆಯ ಚರ್ಚೆ ಸಂದರ್ಭ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸಾಧ್ಯತೆ ನಿರೀಕ್ಷಿಸಲಾಗಿತ್ತು. ಆದರೆ ದಿಢೀರ್ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವುದು ಕಾಯ್ದೆ ವಿಚಾರವಾಗಿ ಅವರ ನಿಲುವು ಈಗಲೂ ಅಸ್ಪಷ್ಟವಾಗಿದೆ.
ಮತಾಂತರ ನಿಷೇಧ ಕಾಯ್ದೆ ವಿಚಾರವಾಗಿ ಶಾಸಕರಿಗೆ ಸೂಚನೆ ನೀಡಿರುವ ಕುಮಾರಸ್ವಾಮಿ, ಇದನ್ನು ವಿರೋಧಿಸುವಂತೆ ಸೂಚಿಸಿ ತೆರಳಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ ಸಂಜೆ ಶಾಸಕಾಂಗ ಸಭೆ ನಡೆಸಿ ಚರ್ಚಿಸಿದ ಕುಮಾರಸ್ವಾಮಿ ನಂತರ ರಾತ್ರಿ ಸಭೆ ನಡೆಸಿ, ಪಕ್ಷದ ನಾಯಕರಿಗೆ ಮಾಹಿತಿ ರವಾನಿಸಿದ್ದು, ವಿಧೇಯಕದ ವಿಚಾರವಾಗಿ ಜೆಡಿಎಸ್ ನಿಲುವು ಏನು ಎನ್ನುವುದು ಇಂದು ತಿಳಿದು ಬರಲಿದೆ.
ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹೆಚ್. ಡಿ ರೇವಣ್ಣ ಕಲಾಪದ ಆರಂಭದ ದಿನದಿಂದಲೂ ವಿಧಾನ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಮತಾಂತರ ನಿಷೇಧ ಕಾಯ್ದೆ ಕುರಿತ ಚರ್ಚೆ ಸಂದರ್ಭದಲ್ಲಿ ಅವರೇ ನೇತೃತ್ವ ವಹಿಸಲಿದ್ದಾರೆ. ಈ ಸಾರಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಭಾಗಿಯಾಗಿಲ್ಲ. ಇದೀಗ ಇನ್ನೊಂದೆಡೆ ಎರಡು ದಿನ ಮಾತ್ರ ಕಲಾಪದಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ಸಹ ವಾಪಸ್ ಆಗಿರುವುದು ಅಚ್ಚರಿ ಮೂಡಿಸಿದೆ.