ಚಿಕ್ಕೋಡಿ: ಕಳೆದ ವರ್ಷ ನೆರೆಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ಬಿಡುಗಡೆ ಮಾಡಿದ ಪರಿಹಾರವು ಸಂತ್ರಸ್ತ ಫಲಾನುಭವಿಗಳಿಗೆ ಸರಿಯಾಗಿ ಹಣ ತಲುಪದ ಕಾರಣ ವೃದ್ಧನೋರ್ವ ಸಂಕಷ್ಟದಲ್ಲಿದ್ದು ತ್ವರಿತ ಗತಿಯಲ್ಲಿ ಹಣ ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಕೃಷ್ಣಾ ನದಿ ತೀರದ ಜನರು ನೆರೆ ಹಾವಳಿಗೆ ಸಿಕ್ಕು ಮನೆ-ಮಠಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದು, ಅವರ ಜೀವನ ನರಕ ಸದೃಶ್ಯವಾಗಿತ್ತು. ಪ್ರವಾಹ ತಗ್ಗಿದ ನಂತರ ಬಿದ್ದ ಮನೆಗಳ ಸ್ಥಿತಿಗಳನ್ನು ಸರ್ವೇ ಮಾಡಿ ಎ, ಬಿ, ಸಿ ಎಂದು ವಿಂಗಡಿಸಿ ಮನೆ ಕಟ್ಟಿಕೊಳ್ಳಲು ಮೊದಲ ಹಂತವಾಗಿ ಹಣ ಬಿಡುಗಡೆ ಮಾಡಿತ್ತು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ದಶರಥ ಭೋವಿ ಕಳೆದ ವರ್ಷ ಪ್ರವಾಹದಲ್ಲಿ ನೆರೆಹಾವಳಿಯಿಂದ ಮನೆ ಕಳೆದುಕೊಂಡಿದ್ದಾರೆ. ಇವರಿಗೆ ಸರ್ಕಾರ ಎ ಕೆಟೆಗರಿಯಲ್ಲಿ ಮನೆ ಮಂಜೂರು ಮಾಡಿತ್ತು. ಆದರೆ, ಮನೆ ಕಟ್ಟಿಕೊಳ್ಳಲು ಹಣ ಮಾತ್ರ ಖಾತೆಗೆ ಜಮೆ ಆಗದಿರುವುದರಿಂದ ಪಂಚಾಯತಿಗೆ ಸಾಕಷ್ಟು ಸಲ ಹೋಗಿ ಕೇಳಿದರೆ ಅಲ್ಲಿನ ಪಿಡಿಓ ಅವರು ಆಗ ಬರುತ್ತದೆ, ಈಗ ಬರುತ್ತದೆ ಎಂದು ಹೇಳಿದ್ದನ್ನು ಕೇಳಿ ಕೇಳಿ ನಿರಾಶೆಗೊಂಡಿದ್ದಾರೆ. ನಂತರ ತಾವೇ ರಾಯಬಾಗ ತಹಶೀಲ್ದಾರ್ ಕಚೇರಿಗೆ ಮತ್ತು ಬೆಳಗಾವಿ ಜಿಪಂ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿದಾಗ ತಮ್ಮ ಖಾತೆಗೆ ಮಂಜೂರ ಆಗಬೇಕಿದ್ದ ಹಣ ಬೇರೆ ವ್ಯಕ್ತಿಯೊಬ್ಬರ ಖಾತೆಗೆ ಜಮೆ ಆಗಿರುವುದು ಬೆಳಕಿಗೆ ಬಂದಿದೆ.
ಇದರಿಂದ ದಂಗಾದ ದಶರಥ ಭೋವಿ ಅವರು ಇದನ್ನು ಸರಿಪಡಿಸುವಂತೆ ಪಿಡಿಓ, ರಾಯಬಾಗ ತಹಶೀಲ್ದಾರ್ ಅವರನ್ನು ಒತ್ತಾಯಿಸಿದಾಗ ಒಂದು ಲಕ್ಷ ಮೊತ್ತದ ಡಿಡಿ ನೀಡಿ, ಜಮೆ ಪಡೆದ ವ್ಯಕ್ತಿಯಿಂದ ಹಣ ಪಡೆಯಲು ಯಶಸ್ವಿಯಾಗಿದ್ದರು. ಆದರೆ, ಸಂಬಂಧಿಸಿದ ಇಲಾಖೆ ಸಿಬ್ಬಂದಿಯವರು ಮುಂದಿನ ಕಂತು ಬಿಡುಗಡೆ ಸಮಯದಲ್ಲಿ ಈ ಹಿಂದೆ ನಡೆದ ತಪ್ಪನ್ನು ಸರಿಪಡಿಸಿ, ಸರಿಯಾದ ಫಲಾನುಭವಿ ಖಾತೆಗೆ ಹಣ ಮಂಜೂರು ಮಾಡುವ ಕ್ರಮಕೈಗೊಳ್ಳದೇ, ಮತ್ತೆ ಅದೇ ರೀತಿ ಪುನರಾವರ್ತನೆಗೊಂಡಿದ್ದರಿಂದ ಸಂತ್ರಸ್ತ ದಶರಥ ಭೋವಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆ ಕಳೆದುಕೊಂಡು ವರ್ಷವಾದರೂ ಸರಕಾರದ ಹಣ ಬೇರೆಯವರ ಖಾತೆಗೆ ಜಮೆ ಆಗಿ ಅದನ್ನು ಪಡೆಯಲು ಸಾಕಷ್ಟು ಕಷ್ಟ ಮತ್ತು ವಿಳಂಬವಾಗುತ್ತಿದೆ. ಇದರಿಂದ ಮನೆ ಇನ್ನು ಪ್ರಾರಂಭದ ಹಂತದಲ್ಲಿದೆ. ತಮ್ಮ ಖಾತೆಗೆ ಹಣ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಕೇಳಿಕೊಂಡರು ಅವರು ನಮ್ಮ ಮಾತು ಕಿವಿಗೆ ಹಾಕಿಕೊಳ್ಳದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಇದು ನನ್ನೊಬ್ಬನ ಸಮಸ್ಯೆಯಲ್ಲ, ತಾಲೂಕಿನಲ್ಲಿ ಇನ್ನೂ ಇಂತಹ ಪ್ರಕರಣಗಳು ನಡೆದಿರುವ ಸಂಶಯ ವ್ಯಕ್ತವಾಗಿದೆ. ಮೇಲಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಸರಕಾರದ ಹಣ ದುರಪಯೋಗವಾಗದಂತೆ ನೋಡಿಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಸಂತ್ರಸ್ತ ಫಲಾನುಭವಿಗಳಿಗೆ ಬೇಗನೆ ಹಣ ಮಂಜೂರು ಮಾಡಬೇಕೆಂದು ದಶರಥ ಭೋವಿ ಅವರು ಒತ್ತಾಯಿಸಿದ್ದಾರೆ.