ಬೆಳಗಾವಿ: ಬೈಲಹೊಂಗಲ ಸಬ್‌ಜೈಲ್‌ನಿಂದ ವಿಚಾರಣಾಧೀನ ಕೈದಿ ಪರಾರಿ ಪ್ರಕರಣ ಸಂಬಂಧ ಬೈಲಹೊಂಗಲ ಉಪ ಕಾರಾಗೃಹ ಸಿಬ್ಬಂದಿ ವಿರುದ್ಧ ಕೇಸ್ ದಾಖಲಾಗಿದೆ.
ಜಿಲ್ಲೆಯ ಬೈಲಹೊಂಗಲ ಉಪಕಾರಾಗೃಹದ ಮುಖ್ಯ ವೀಕ್ಷಕ ವೈ.ಐ.ಬುದ್ನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ತವ್ಯಲೋಪ, ನಿರ್ಲಕ್ಷ್ಯ ಆರೋಪದಡಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮಾರ್ಚ್ 16ರಂದು ಬೈಲಹೊಂಗಲ ಸಬ್‌ಜೈಲಿನಿಂದ ಖಾದಿರಸಾಬ್ ರಾಜೇಖಾನ್ ಎಂಬ ಕೈದಿ ಪರಾರಿಯಾಗಿದ್ದನು. ಕಳೆದ 15 ದಿನಗಳ ಹಿಂದೆ ಆರೋಪಿಯನ್ನು ಮುರಗೋಡ ಪೊಲೀಸರು ಬಂಧಿಸಿದ್ದರು. ಆದರೆ ಮಾರ್ಚ್ 16 ರಂದು ಬೆಳಗ್ಗೆ ಜೈಲಿನ ಮುಖ್ಯದ್ವಾರದಿಂದ ಕೈದಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಈತನ ಮೇಲೆ ಕೊಲೆಯತ್ನ, ದೊಂಬಿ, ಜಾತಿ ನಿಂದನೆ ಪ್ರಕರಣಗಳು ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಈತ ಜೈಲು ಸಿಬ್ಬಂದಿಯ ನಿರ್ಲಕ್ಷ್ಯದಿಂದ, ಸಬ್ ಜೈಲ್ ಮುಖ್ಯದ್ವಾರದ ಕೀ ಬಳಸಿಕೊಂಡು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಓದಿ : ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಹೈಟೆಕ್ ಸ್ಪರ್ಶ.. ಚೆಲುವನಾರಾಯಣನಿಗೆ ತೆಪ್ಪೋತ್ಸವ, ಗಂಗಾರತಿ ಸೇವೆ