ಬೆಳಗಾವಿ: ನಾಡದ್ರೋಹಿ ಎಂಇಎಸ್, ಶಿವಸೇನೆಯ ಕಾರ್ಯಕರ್ತರ ವಿರುದ್ಧ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾನೂನು ಉಲ್ಲಂಘಿಸಿ ಪ್ರತಿಭಟನೆ ಮಾಡಿರುವ 200 ಎಂಇಎಸ್, ಶಿವಸೇನೆ ಕಾರ್ಯಕರ್ತರ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್, ದೀಪಕ್ ದಳವಿ, ಶಿವಸೇನೆ ಮುಖಂಡ ಪ್ರಕಾಶ ಶಿರೋಳಕರ, ಮಾಜಿ ಮೇಯರ್, ಹಾಲಿ ಪಾಲಿಕೆ ಸದಸ್ಯ ಸೇರಿ 26 ಮುಖಂಡರು ಹಾಗೂ 200 ಅಪರಿಚಿತರ ವಿರುದ್ಧ ದೂರು ದಾಖಲಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಮೇಲಿನ ಕನ್ನಡ ಧ್ವಜ ತೆರವುಗೊಳಿಸಬೇಕು, ಕನ್ನಡ ರಾಜ್ಯೋತ್ಸವದಂದು ಕರಾಳ ದಿನಕ್ಕೆ ಅವಕಾಶ ನೀಡಬೇಕು ಹಾಗೂ ಮರಾಠಿಯಲ್ಲಿ ನಾಮಫಲಕ ಹಾಕುವಂತೆ ಎಂಇಎಸ್ ಕಾರ್ಯಕರ್ತರು ಪುಂಡಾಟ ಪ್ರದರ್ಶಿಸಿದ್ದರು. ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡದಿದ್ದರೂ ಎಂಇಎಸ್ ಕಾರ್ಯಕರ್ತರು ಮೆರವಣಿಗೆ ಮಾಡಿ ನಿಯಮ ಉಲ್ಲಂಘಿಸಿದ್ದರು.
ಈ ವೇಳೆ ಮನವಿ ಸ್ವೀಕರಿಸಲು ಬಂದಿದ್ದ ಅಪರ ಜಿಲ್ಲಾಧಿಕಾರಿಗೂ ಅಪಮಾನ ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ, ರಸ್ತೆ ತಡೆದು ಸಾರ್ವಜನಿಕರಿಗೆ ತೊಂದರೆ ಹಿನ್ನೆಲೆಯಲ್ಲಿ ಇದೀಗ ಕೇಸ್ ದಾಖಲಿಸಿದ್ದಾರೆ. ಐಪಿಸಿ 1860ರನ್ವಯ (U/s.143, 147, 283, 149), ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 2020 (u/s 4,5(1),5(3),5(4)) ರಡಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 25ರಂದು ಅನುಮತಿ ಇಲ್ಲದೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದ ಎಂಇಎಸ್ ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದ್ದರು.