ಚಿಕ್ಕೋಡಿ: ಕೊರೊನಾ ಹೆಮ್ಮಾರಿಗೆ ರೈತರು ಬೆಳೆದ ಹಣ್ಣಿನ ಬೆಳೆಗಳಿಗೆ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದ ಹಿನ್ನೆಲೆ ಅನ್ನದಾತರು ಲಕ್ಷಾಂತರ ರೂ. ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತುನೋರ್ವ ಮನವಿ ಮಾಡಿದ್ದಾರೆ.
ಚಿಕ್ಕೋಡಿ ಉಪವಿಭಾಗದ ರಾಯಬಾಗ ತಾಲೂಕಿನ ಬೆಳಕುಡ ಗ್ರಾಮದ ಬಸವರಾಜ ಶಿವಪುತ್ರ ಕೊಟಗಿ ಎಂಬ ರೈತನು 1 ಲಕ್ಷಕ್ಕೂ ಅಧಿಕ ಸಾಲ ಮಾಡಿ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಕಲಂಗಡಿ ಹಣ್ಣು ಬೆಳೆ ಬೆಳೆದಿದ್ದಾರೆ. ಫಲವತ್ತಾಗಿ ಕಲಂಗಡಿ ಹಣ್ಣು ಬಂದಿದೆ. ಆದರೆ, ಈ ಕೊರೊನಾದಿಂದಾಗಿ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಾಗಣೆ ಸ್ಥಗಿತವಾಗಿದ್ದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಕನಿಷ್ಠ ಒಂದು ಟನ್ ಕಲ್ಲಂಗಡಿ 10 ರ ರಿಂದ 15 ಸಾವಿರ ರೂ.ಗೆ ಮಾರಾಟವಾಗುತ್ತಿತ್ತು. ಆದ್ರೆ ಕೊರೊನಾ ಹಿನ್ನೆಲೆ ಒಂದು ಟನ್ ಕಲ್ಲಂಗಡಿ ದರ ಈಗ ಕೇವಲ 2 ರಿಂದ 3 ಸಾವಿರ ರೂ.ಗೆ ತಲುಪಿದೆ. ಇಷ್ಟು ಕಡಿಮೆ ಬೆಲೆ ಇದ್ದರೂ ಯಾರೂ ಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ರೈತ ಸುಮಾರು 4 ಲಕ್ಷ ರೂಪಾಯಿ ನಷ್ಟ ಅನುಭವಿಸಿದ್ದು, ಬೇಸತ್ತು ಕಲಂಗಡಿ ಹಣ್ಣನ್ನು ಒಡೆದು ಹಾಕುತ್ತಿದ್ದಾರೆ.
ಕಲ್ಲಂಗಡಿ ಬೆಳೆದ ಹತ್ತಾರು ರೈತರು ಸಂಕಷ್ಟಕ್ಕೆ ಸಿಲುಕಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಸರ್ಕಾರ, ರೈತರು ಖರ್ಚು ಮಾಡಿದ ಹಣವನ್ನಾದರೂ ಪರಿಹಾರವಾಗಿ ನೀಡಬೇಕು. ಈ ಕುರಿತು ಜಿಲಾಡಳಿತ ಮತ್ತು ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳು ಭೇಟಿ ನೀಡಿ, ಸೂಕ್ತ ಸರ್ವೆ ಮಾಡಿ ಖರ್ಚು ಮಾಡಿದ ಹಣ ಒದಗಿಸಿ ಕೊಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.