ಬೆಳಗಾವಿ: ಕಾಂಗ್ರೆಸ್ ಜತೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಇಂದು ದಿಢೀರ್ ಬೆಂಬಲಿಗರ ಸಭೆ ನಡೆಸುತ್ತಿದ್ದು, ಇದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಗೋಕಾಕದಲ್ಲಿರುವ ತಮ್ಮ ನಿವಾಸದಲ್ಲಿ ರಮೇಶ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿದ್ದಾರೆ. ಗೋಕಾಕ್ ನಗರಸಭೆ, ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಿಂದಲೂ ರಮೇಶ ಜಾರಕಿಹೊಳಿ ದೂರ ಉಳಿದಿದ್ದರು. ಅಲ್ಲದೇ ಎರಡು ದಿನಗಳ ಹಿಂದೆ ಬಳ್ಳಾರಿಗೆ ತೆರಳಿದ್ದ ಅವರು, ಅಲ್ಲಿನ ಬಿಜೆಪಿ ಅಭ್ಯರ್ಥಿ ಪರ ಪರೋಕ್ಷವಾಗಿ ಪ್ರಚಾರ ನಡೆಸಿದ್ದರು. ನಿನ್ನೆ ಸಂಜೆ ಗೋಕಾಕ್ಗೆ ಆಗಮಿಸಿ, ಇಂದು ದಿಢೀರ್ ಬೆಂಬಲಿಗರ ಸಭೆ ನಡೆಸುತ್ತಿದ್ದಾರೆ.
ಇಷ್ಟು ದಿನ ಮೌನವಾಗಿದ್ದ ರಮೇಶ ಜಾರಕಿಹೊಳಿ ಸಭೆಯ ಬಳಿಕವಾದರೂ ಮೌನ ಮುರಿಯುವರೇ? ಬಿಜೆಪಿ ಸೇರುವ ಅಥವಾ ಕಾಂಗ್ರೆಸ್‍ನಲ್ಲೇ ಉಳಿಯುವ ಬಗ್ಗೆ ಸಭೆ ಬಳಿಕ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.