ಬೆಳಗಾವಿ: ನಾನೇನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವಂತೆ ಕೇಳಿದ್ದೆ. ನನ್ನ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ. ಅವರಿಗೆ ನಾನೂ ಯಾವತ್ತಿಗೂ ಋಣಿಯಾಗಿರುತ್ತೇನೆ ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹರ್ಷ ವ್ಯಕ್ತಪಡಿಸಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತೇನೆ. ನಿಗಮದ ಪುನಶ್ಚೇತನಕ್ಕೆ ಶ್ರಮಿಸುವೆ ಎಂದರು.
ಗೋವಿಂದ ಕಾರಜೋಳ ಅವರು ನಮ್ಮ ಸಮುದಾಯದ ಪ್ರಬಲ ನಾಯಕ. ಅವರಿಗೆ ಡಿಸಿಎಂ ಸ್ಥಾನ ಸಿಕ್ಕಿದ್ದು ಸಮುದಾಯಕ್ಕೆ ಸಮಾಧಾನ ಇದೆ. ಈ ಕಾರಣಕ್ಕಾಗಿ ನಾನು ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರಲಿಲ್ಲ. ನಿಗಮ ಸ್ಥಾನ ಕೇಳಿದ್ದೆ ಎಂದರು.
ನಾನು ಮೊದಲಿನಿಂದಲೂ ಬಸವಣ್ಣನ ಅನುಯಾಯಿ. ಶ್ರಾವಣ ಸೋಮವಾರದ ದಿನದಂದೇ ನನಗೆ ಹೊಸ ಜವಾಬ್ದಾರಿ ಸಿಕ್ಕಿದೆ. ನನ್ನ ಈ ಆಯ್ಕೆಗೆ ಶ್ರಮಿಸಿದ ನಮ್ಮೆಲ್ಲಾ ನಾಯಕರಿಗೆ ನಾನು ಋಣಿಯಾಗಿರುವೆ ಎಂದು ಹೇಳಿದ್ದಾರೆ.