ಚಿಕ್ಕೋಡಿ: ತಾಲೂಕಿನ ಯಡೂರು-ಕಲ್ಲೋಳ ಗ್ರಾಮಗಳ ಮಧ್ಯದಲ್ಲಿರುವ ಕೃಷ್ಣಾ ನದಿಯಲ್ಲಿ ಯಡೂರು-ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ಧರಾಮ ಸ್ವಾಮೀಜಿ ಭಕ್ತರೊಂದಿಗೆ ಸಂಕ್ರಮಣ ಸ್ನಾನ ಮಾಡಿದರು.
ಮಕರ ಸಂಕ್ರಾಂತಿಯ ಇನ್ನೊಂದು ಹೆಸರು ಉತ್ತರಾಯಣ ಪುಣ್ಯಕಾಲ. ಇಡೀ ಉತ್ತರಾಯಣವೇ ದೇವತೆಗಳಿಗೆ ಪ್ರಿಯವಾದದ್ದು. ದೇವಕಾರ್ಯ, ಶುಭ ಕಾರ್ಯಗಳಿಗೆ ಈ ದಿನ ಬಹಳ ಪ್ರಾಶಸ್ತ್ಯವಾಗಿದೆ. ಇಂತಹ ಉತ್ತರಾಯಣವನ್ನು ಪ್ರಾರಂಭಿಸುವ ದಿನವಾದ ಮಕರ ಸಂಕ್ರಾಂತಿಗೆ ವಿಶೇಷವಾದ ಮಾನ್ಯತೆಯಿದೆ. ಈ ದಿನ ಶ್ರದ್ಧಾಭಕ್ತಿಯಿಂದ ಮಾಡುವ ಸ್ನಾನ, ಧ್ಯಾನ, ದಾನ, ಹೋಮ, ಪೂಜೆ, ತರ್ಪಣ ಮುಂತಾದುವುಗಳಿಗೆ ವಿಶೇಷವಾದ ಫಲ ಸಿಗುತ್ತದೆ ಎನ್ನುವ ವಿಚಾರ ಹಲವು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ.
ಹೀಗಾಗಿ, ಜಗದ್ಗುರು ಡಾ. ಚೆನ್ನಸಿದ್ಧರಾಮ ಸ್ವಾಮೀಜಿ ಕೃಷ್ಣಾ ನದಿಯಲ್ಲಿ ಭಕ್ತರೊಂದಿಗೆ ಸಂಕ್ರಮಣ ಸ್ನಾನ ಮಾಡಿದರು. ಕಳೆದ ವರ್ಷ ಉಕ್ಕಿ ಹರಿದಿರೋ ಕೃಷ್ಣೆ, ಈ ವರ್ಷ ರೌದ್ರಾವತಾರ ತೋರಬೇಡ. ಶಾಂತಳಾಗಿ ಹರಿದು ನದಿ ತೀರದ ಜನರು ಸೇರಿದಂತೆ ಎಲ್ಲರಿಗೂ ಸನ್ಮಂಗಲವನ್ನುಂಟು ಮಾಡು ಎಂದು ಪ್ರಾರ್ಥಿಸಿದರು.
ಓದಿ:ಶೃಂಗೇರಿ ಶಾರದಾ ಪೀಠಕ್ಕೆ CJI ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಬೊಬ್ಡೆ
ಈ ವರ್ಷ ಯಡೂರು ವೀರಭದ್ರೇಶ್ವರನ ದೇವಾಲಯದಲ್ಲಿ 11 ದಿನಗಳ ಕಾಲ ಲಕ್ಷ ಬಿಲ್ವಾರ್ಚನೆಯನ್ನು ಮಾಡಲಾಗುತ್ತಿದೆ. ಕಳೆದ ಭಾರೀ ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿದು, ಯಡೂರು-ಕಲ್ಲೋಳ ಸೇರಿದಂತೆ ನೂರಾರು ಗ್ರಾಮಗಳ ಸಾವಿರಾರು ಜನರು ಕಣ್ಣೀರು ಹಾಕುವಂತಾಗಿತ್ತು. ಮಳೆಗಾಲದಲ್ಲೂ ಕೃಷ್ಣೆ ಶಾಂತಳಾಗಿ ಹರಿದು, ಎಲ್ಲರೂ ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಲಿ ಎಂದು ಭಕ್ತರು ಕೂಡ ಕೃಷ್ಣೆಯಲ್ಲಿ ನಿವೇದಿಸಿಕೊಂಡರು.