ಬೆಳಗಾವಿ: ಬೆಳಗಾವಿ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಳಂ ಬೆಳಗ್ಗೆ ಟೆಂಪಲ್ ರನ್ ಆರಂಭಿಸಿದ್ದಾರೆ.
ಮೆರಿಯಟ್ ಹೋಟೆಲ್ನಿಂದ ನೇರವಾಗಿ ಬೆಳಗಾವಿಯ ಹಿಂಡಲಗಾ ಗಣಪತಿ ದೇವಸ್ಥಾನಕ್ಕೆ ಆಗಮಿಸಿದ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಡಿಕೆಶಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಾಥ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಎಲ್ಲ ವಿಘ್ನಗಳನ್ನು ನಿವಾರಣೆ ಮಾಡುವ ದೇವರು ವಿನಾಯಕ. ರಾಜ್ಯ, ರಾಷ್ಟ್ರದಲ್ಲಿರುವ ವಿಘ್ನಗಳು ನಿವಾರಣೆಯಾಗಲಿ ಹಾಗೂ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲಿ ಎಂದು ಕೋರಿ ವಿಶೇಷ ಪೂಜೆ ಮಾಡಿದ್ದೇನೆ ಎಂದರು.
ದೇಶದಲ್ಲಿ ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಎರಡೂ ಉಳಿಯಬೇಕು. ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಜನರಿಗೆ ತೊಂದರೆಯಾಗಿದ್ದು, ಎಲ್ಲ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟ ನಿವಾರಣೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ಎಂದರು.