ಚಿಕ್ಕೋಡಿ : ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಏಪ್ರಿಲ್ 23ಕ್ಕೆ ನಡೆಯಲಿರುವ ಜಡಿಸಿದ್ದೇಶ್ವರ ಜಾತ್ರೆ ಹಿನ್ನೆಲೆ ಮತಗಟ್ಟೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಜಾತ್ರೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಸಾರ್ವತ್ರಿಕವಾಗಿ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುತ್ತದೆ ಎಂದು ಸುಣಧೋಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗ್ರಾಮದ ಜಡಿಸಿದ್ದೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಏಪ್ರಿಲ್ 23ಕ್ಕೆ ಮತಗಟ್ಟೆಯನ್ನು ಸ್ಥಳಾಂತರಿಸದಿದ್ದರೆ ಚುನಾವಣೆಗೆ ಸಾರ್ವತ್ರಿಕವಾಗಿ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ತಹಸೀಲ್ದಾರ್ ಮುರಳಿಧರ ತಳ್ಳಿಕೇರೆ ಅವರಿಗೆ ಶಿವಾನಂದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಸುಣಧೋಳಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪವಾಡ ಪುರುಷ ಎಂದೇ ಹೆಸರುವಾಸಿಯಾದ ಸುಣಧೋಳಿಯ ಜಡಿಸಿದ್ದೇಶ್ವರರ ರಥೋತ್ಸವ ಪ್ರತಿ ವರ್ಷವು ಹುಣ್ಣಿಮೆಯಾದ ಐದನೇ ದಿನಕ್ಕೆ ಜರಗುತ್ತದೆ. ರೂಢಿಯಂತೆ ಈ ವರ್ಷವು ಏಪ್ರಿಲ್ 23ಕ್ಕೆ ಹಗ್ಗವಿಲ್ಲದೆ ರಥೋತ್ಸವ ಜರುಗಲಿದ್ದು, ಈ ಪವಾಡವನ್ನು ಕಣ್ಣು ತುಂಬಿಕೊಳ್ಳಲು ರಾಜ್ಯ ಮತ್ತು ಅಂತಾರಾಜ್ಯದಿಂದ ಸಾವಿರಾರು ಭಕ್ತರು ಹರಿದು ಬರುತ್ತಾರೆ. ಏಪ್ರಿಲ್ 23 ಕ್ಕೆ ಚುನಾವಣೆ ನಡೆಯಲಿದ್ದು, ಮತಗಟ್ಟೆಯು ಮಠದಿಂದ ಕೇವಲ 20 ಅಡಿ ದೂರದಲ್ಲಿದೆ. ಅದ್ದರಿಂದ ಈ ವರ್ಷ ತಾತ್ಕಾಲಿಕವಾಗಿ ಮತಗಟ್ಟೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಜಾತ್ರೆಗೆ ಅನುಮತಿಯನ್ನು ನೀಡುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಒಂದು ವೇಳೆ ಮತಗಟ್ಟೆಯನ್ನು ಸ್ಥಳಾಂತರಿಸದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸುತ್ತೇವೆ ಎಂದಿದ್ದಾರೆ. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಮತದಾನಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆಗಳಿದ್ದು, ಮತಗಟ್ಟೆಯನ್ನು ಸ್ಥಳಾಂತರಿಸಬೇಕೆಂಬ ಒತ್ತಾಯ ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ಥಳಾಂತರಿಸದಿದ್ದರೆ ಚುನಾವಣೆಗೆ ಬಹಿಷ್ಕಾರ, ಚುನಾವಣಾ ಪ್ರಚಾರಕ್ಕೆ ಅನುಮತಿ ಇಲ್ಲ ಎನ್ನುವ ಪೋಸ್ಟ್ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇಷ್ಟೆಲ್ಲಾ ಆದರೂ ಜಿಲ್ಲಾಡಳಿತ ಮತಗಟ್ಟೆ ಸ್ಥಳಾಂತರದ ಬಗ್ಗೆ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಅರಂಭಾವಿ ಮತಕ್ಷೇತ್ರದಲ್ಲಿ ಬರುವ ಸುಣಧೋಳಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಯಾವ ಕ್ರಮ ತೆಗೆದುಕೊಳ್ಳುತ್ತದೆ ಅನ್ನುವುದನ್ನ ಕಾದು ನೋಡಬೇಕಿದೆ.