ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕೃಷ್ಣಾ ನದಿ ಪ್ರವಾಹಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಆದರೆ ಈವರೆಗೂ ತುರ್ತು ಪರಿಹಾರದ ಹಣ ಮಾತ್ರ ಜನರ ಕೈಸೇರಿಲ್ಲ.
ತುರ್ತು ಪರಿಸ್ಥಿತಿಗೆ ಅನುಗುಣವಾಗಿ 10,000 ರೂ. ಬಿಡುಗಡೆ ಮಾಡಬೇಕೆಂದು ಸಿಎಂ ಆದೇಶ ನೀಡಿ ಇಂದಿಗೆ ಸುಮಾರು 33 ದಿನಗಳೇ ಕಳೆದಿವೆ. ತುರ್ತು ಪರಿಸ್ಥಿತಿಯ ಹಣವೇ ಬಿಡುಗಡೆಯಾಗಿಲ್ಲ. ಇನ್ನು ನಮ್ಮ ಬೆಳೆ ಪರಿಹಾರ ಧನ ಯಾವಾಗ ಸಿಗುತ್ತದೆ ಎಂಬುದು ನೆರೆ ಸಂತ್ರಸ್ತರ ಪ್ರಶ್ನೆಯಾಗಿದೆ.
ಅರ್ಧಕ್ಕರ್ಧ ನೀರಿನಲ್ಲಿ ಕೊಚ್ಚಿ ಹೋಗಿರುವ ತಮ್ಮ ಬದುಕನ್ನು ಸಂಭಾಳಿಸಲು ಪ್ರವಾಹ ಪೀಡಿತ ಪ್ರದೇಶದ ಜನತೆ ಇನ್ನೂ ಸೆಣಸಾಡುತ್ತಿದ್ದಾರೆ. ಮುಖ್ಯಮಂತ್ರಿ, ಗೃಹಸಚಿವರು, ಕಂದಾಯ ಸಚಿವ ಸಚಿವರ ತಂಡ, ಡಿಸಿ-ಎಸಿಗಳು ಬಂದು ಹೋದರೂ ಅಲ್ಲಿನ ಜನರ ಜೀವನ ಮಾತ್ರ ಇನ್ನೂ ಕೆಸರಿನಲ್ಲಿದೆ. ನೆರೆ, ಮಹಾಮಳೆ ಹಾಗೂ ಭೂಕುಸಿತದ ವಿಕೋಪ ತಗ್ಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರು ಕಾಳಜಿ ಕೇಂದ್ರಗಳಿಂದ ವಾಪಸ್ ತಮ್ಮ ಊರುಗಳಿಗೆ ಬರುತ್ತಿದ್ದಾರೆ. ಆದರೆ ಅಲ್ಲಿ ಅವರ ಮನೆಗಳು ಕುಸಿದಿವೆ. ಆದರೆ ಅವರಿಗೆ ಘೋಷಿಸಿದ್ದ 10 ಸಾವಿರ ರೂ. ತುರ್ತು ಪರಿಹಾರ ಹಣವನ್ನು ಜಿಲ್ಲಾಡಳಿತದ ಮೂಲಕ ತಲುಪಿಸಲು ಕೂಡ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ವಿಶೇಷ ಆಹಾರ ಕಿಟ್‌ಗಳ ವಿತರಣೆಯೂ ಕೂಡ ಅಸಮರ್ಪಕವಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಇಂದು ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದು, ಇನ್ನಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.