ಬೆಳಗಾವಿ : ಕಳೆದ ಎರಡು ದಿನಗಳ ಹಿಂದೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್ ಅವರು ವರ್ಗಾವಣೆ ಆದರೂ ಸಹ ಸದ್ಯ ಬೆಳಗಾವಿ ನಗರದಲ್ಲಿ ವಿಷಮ ಪರಿಸ್ಥಿತಿ ಇರುವುದರಿಂದ ಅಧಿಕಾರ ಹಸ್ತಾಂತರಿಸದೇ ಮುಂದೆ ನಿಂತು ಕರ್ತವ್ಯ ನಿಷ್ಠೆ ತೋರಿದ್ದಾರೆ.
ನಗರದ ಸಮೀಪದಲ್ಲಿರುವ ಪೀರನವಾಡಿ ವೃತ್ತದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ನಿರ್ಮಾಣ ವಿಷಯವಾಗಿ ಕಳೆದ 14 ದಿನಗಳಿಂದ ವಿವಾದ ಉಂಟಾಗಿದೆ. ವೃತ್ತದಲ್ಲಿಯೇ ರಾಯಣ್ಣನ ಪುತ್ಥಳಿ ನಿರ್ಮಾಣ ಮಾಡುವಂತೆ ರಾಯಣ್ಣ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ. ಅಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬೆಳಗಾವಿಗೆ ಬಂದು ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.
ಅಭಿಮಾನಿಗಳ ಭಾವನಾತ್ಮಕ ಮನವಿಗೆ ಸ್ಪಂದಿಸದ ಸರ್ಕಾರದ ನಡೆಯಿಂದ ಬೇಸತ್ತ ಕನ್ನಡಪರ ಹೋರಾಟಗಾರರು ಶುಕ್ರವಾರ ಬೆಳ್ಳಂಬೆಳಗ್ಗೆ ಉದ್ದೇಶಿತ ವೃತ್ತದಲ್ಲಿಯೇ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದಲ್ಲದೆ ವಿಜೃಂಭಣೆಯನ್ನು ಮಾಡಿವೆ. ಇದರಿಂದಾಗಿ ಶಿವಾಜಿ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರಿಂದ ನಗರದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಯಾವ ಸಮಯದಲ್ಲಿ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂಬ ಆತಂಕ ನಗರ ನಿವಾಸಿಗಳಲ್ಲಿ ಉಂಟಾಗಿದೆ. ಇದರಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಾರದು ಎಂಬ ಉದ್ದೆಶದಿಂದ ವರ್ಗಾವಣೆ ಆದೇಶ ಕೈ ಸೇರಿದ್ದರೂ, ಅಧಿಕಾರ ಹಸ್ತಾಂತರ ಮಾಡದೇ ಡಿಸಿಪಿ ಲಾಟ್ಕರ್ ಅವರು, ಬೆಳ್ಳಂಬೆಳಗ್ಗೆ ವಿವಾದಿತ ಸ್ಥಳಕ್ಕೆ ತೆರಳಿ ಅಲ್ಲೇ ಬೀಡು ಬಿಟ್ಟಿದ್ದಾರೆ.
ಜತೆಗೆ ಎರಡು ಗುಂಪಿನ ಮುಖಂಡರಿಗೆ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ನಂತರ ಪೊಲೀಸ್ ಆಯುಕ್ತ ಡಾ. ಕೆ. ತ್ಯಾಗರಾಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಒಟ್ಟಿನಲ್ಲಿ ವರ್ಗಾವಣೆ ಆದೇಶ ಕೈಸೇರಿದ್ದರೂ ಶಾಂತಿ ಸ್ಥಾಪನೆಗಾಗಿ ಡಿಸಿಪಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.