ಅಥಣಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಕೇಳಿಬಂದಿದ್ದು, ಸರ್ಕಾರ ಈಗಾಗಲೇ ಎಸ್ಐಟಿ ರಚನೆ ಮಾಡಿದೆ, ಆದಷ್ಟು ಬೇಗ ಸತ್ಯಾಸತ್ಯತೆ ಹೊರ ಬರುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಅಥಣಿ ಪಟ್ಟಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಬೆಳಗಾವಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಗಳ ಸಂಯುಕ್ತ ಆಶ್ರಯದಲ್ಲಿ 2019-20 ನೇ ಸಾಲಿನ ಬುಡುಕಟ್ಟು ಉಪಯೋಜನೆ ವಿಶೇಷ ಕೇಂದ್ರೀಯ ನೆರವಿನಡಿ 23 ಫಲಾನುಭವಿಗಳಿಗೆ ಲಘು ಸರಕು ಸಾಗಾಣಿಕೆ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸವದಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈಗಾಗಲೇ ಸಿಡಿ ಪ್ರಕರಣ ಭೇದಿಸಲು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಸ್ವತಂತ್ರವಾಗಿ ಕಾರ್ಯ ಮಾಡಲು ಸರ್ಕಾರ ಅವಕಾಶ ನೀಡಿದ್ದರಿಂದ ಸತ್ಯಾಸತ್ಯತೆ ಆದಷ್ಟು ಬೇಗ ಹೊರ ಬರುತ್ತದೆ. ನಿನ್ನೆ ಗೃಹ ಸಚಿವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ಕಾನೂನು ಚೌಕಟ್ಟಿನಡಿ ಕ್ರಮಗಳನ್ನು ಕೈಗೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.