ಬೆಳಗಾವಿ: ಅಗತ್ಯವಸ್ತುಗಳ ದರವನ್ನು ವ್ಯಾಪಾರಸ್ಥರು ಉದ್ದೇಶಪೂರ್ವಕವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಕೋವಿಡ್ 2ನೇ ಅಲೆಯನ್ನು ನಿಯಂತ್ರಿಸಲು ಮೇ 10 ರಿಂದ ಮೇ 24 ರವರೆಗೆ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಅಗತ್ಯ ವಸ್ತುಗಳ ದರವನ್ನು ವ್ಯಾಪಾರಸ್ಥರು ಉದ್ದೇಶ ಪೂರ್ವಕವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.
ಹೀಗಾಗಿ ದರ ಹೆಚ್ಚಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ದಿನಸಿ ಹಾಗೂ ಅಗತ್ಯ ವಸ್ತುಗಳ ಸಗಟು, ಕಿರುಕುಳ ಮತ್ತು ಮಾಲ್ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಅಗತ್ಯ ವಸ್ತುಗಳ ಪೂರೈಕೆ ಕಾಯ್ದೆ 1955, ಅಗತ್ಯ ವಸ್ತುಗಳ ಲೆಕ್ಕ ಪತ್ರ, ದಾಸ್ತಾನು ಹಾಗೂ ದರ ನಿರ್ವಹಣೆ ಕಾಯ್ದೆ 1981, ಪ್ರಕೃತಿ ವಿಕೋಪ ನಿರ್ವಹಣೆ ಕಾಯ್ದೆ 2005 ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.