ಬೆಳಗಾವಿ: ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ದೂರು ದಾಖಲಾಗಿರುವ ಕುರಿತಂತೆ ಕಾನೂನು ಹೋರಾಟ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ನಗರದಲ್ಲಿ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾತನಾಡಿದ ಅವರು, ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಕುರಿತು ನಾವು ಕಾನೂನು ಹೋರಾಟ ಮಾಡುತ್ತೇವೆ. ವಸ್ತುಸ್ಥಿತಿ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಓದಿ-24 ಗಂಟೆ, 1 ಫೋಟೋ, 1ಮಿಲಿಯನ್ ಲೈಕ್!: ಫೋಟೋ ಹಿಂದಿನ ಕಹಾನಿ ಏನು?
ಇನ್ನು ಗಣರಾಜ್ಯೋತ್ಸವ ದಿನದ ರೈತರ ಟ್ರ್ಯಾಕ್ಟರ್ ಪರೇಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈತರು ನ್ಯಾಯಬದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರೂ ಬೆಂಬಲ ನೀಡುತ್ತಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಪಕ್ಷ ಹಾಗೂ ನಾವು ರೈತರ ಪರವಾಗಿದ್ದೇವೆ. ಕೇಂದ್ರ ಸರ್ಕಾರ ಕಳೆದ ಮೂರು ತಿಂಗಳಿನಿಂದ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರವೂ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿತು. ಆದ್ರೆ ಅದು ಯಶಸ್ವಿಯಾಗಿಲ್ಲ ಎಂದರು.
ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಮುಂದಿನ ತಿಂಗಳು ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಅಷ್ಟರಲ್ಲಿ ಅಭ್ಯರ್ಥಿ ಹೆಸರು ತಿಳಿಸಲಾಗುವುದು ಎಂದರು. ದೇಶ ನಾಡಿದ್ದು 72ನೇ ಗಣರಾಜ್ಯೋತ್ಸವ ಆಚರಣೆಗೆ ಸಾಕ್ಷಿಯಾಗಲಿದೆ. ದೇಶದಲ್ಲಿ ಮತ್ತಷ್ಟು ಪ್ರಗತಿ ಹೊಂದಬೇಕು. ಎಲ್ಲರೂ ನೆಮ್ಮದಿಯಿಂದ ಬುದುಕಬೇಕು. ಒಗ್ಗಟ್ಟಾಗಿ ಬಾಳಲು ಗಣರಾಜ್ಯೋತ್ಸವ ಪ್ರೇರಣೆಯಾಗಲಿ ಎಂದು ನಾಡಿನ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು.