ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ ಮಟ್ಟದಲ್ಲಿ ಬಿಜೆಪಿ ಬಲಾಢ್ಯವಾಗಿ ಬೆಳೆದಿದೆ. ಕಾಂಗ್ರೆಸ್ ಪಕ್ಷ ತನ್ನ ಶಕ್ತಿ ಕಳೆದುಕೊಳ್ಳುತ್ತಿದ್ದು, ಜೆಡಿಎಸ್ ಈ ಭಾಗದಲ್ಲಿ ಅಡ್ರೆಸ್ ಇಲ್ಲದಂತಿದೆ ಎಂದರು.
ಲೋಕಸಭಾ ಉಪಚುನಾವಣೆಯಲ್ಲಿ ಬೆಳಗಾವಿಯಿಂದ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಬೇಕೆಂದು ಜನತೆಗೆ ಸಿಎಂ ಮನವಿ ಮಾಡಿದರು.
ಗ್ರಾಮ ಪಂಚಾಯಿತಿಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ತಮ್ಮ ಊರಿನ ಹಿರಿಯರನ್ನು ಭೇಟಿ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಎಲ್ಲಾ ಸದಸ್ಯರು ನೀಡಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಅನುದಾನವನ್ನು ಪಂಚಾಯಿತಿಗೆ ಕೊಟ್ಟಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಕರ್ನಾಟಕದ ಪ್ರಗತಿ ಮೋದಿ-ಯಡಿಯೂರಪ್ಪ ಜೋಡಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ
ರಾಮ ಮಂದಿರ ನಿರ್ಮಿಸಬೇಕು ಎಂದು ಮಹಾತ್ಮ ಗಾಂಧೀಜಿ ಅವರಿಗೂ ಆಸೆ ಇತ್ತು, ಅದಕ್ಕೆ ಈಗ ಶಿಲಾನ್ಯಾಸ ಆಗಿದೆ. ಕನಸು ನನಸಾಗುವ ಕಾಲದಲ್ಲಿ ನಾವು ಇದ್ದೇವೆ ಎಂದು ಹೇಳಿದರು.
ದಿ. ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಬೆಳಗಾವಿಯಿಂದ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಎರಡು ಲಕ್ಷಕ್ಕಿಂತ ಅಧಿಕ ಮತಗಳನ್ನು ಕೊಟ್ಟು ಗೆಲ್ಲಿಸಬೇಕು. ಈ ಮೂಲಕ ಸುರೇಶ್ ಅಂಗಡಿಯವರಿಗೆ ಗೌರವ ಸಲ್ಲಿಸಬೇಕೆಂದು ಜನರಲ್ಲಿ ಮನವಿ ಮಾಡಿಕೊಂಡರು. ಹಾಗೆಯೇ ತಾಪಂ, ಜಿಪಂ ಗೆಲ್ಲಲು ಸಹಕಾರ ನೀಡಬೇಕು ಎಂದರು.
ಬೆಳಗಾವಿ ಜಿಲ್ಲೆಯ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹೂ ಮಳೆ ಸುರಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.