ಬೆಳಗಾವಿ: ಸಿಎಂ ಬದಲಾವಣೆ ವಿಷಯ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಆಗ್ತಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದ್ದು, ಇಂದು ಸಂಜೆಯೊಳಗೆ ಹೈಕಮಾಂಡ್ನಿಂದ ಸಂದೇಶ ಬರಲಿದೆ, ಕಾದು ನೋಡಿ ಎಂದಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಸಂಜೆಯೊಳಗೆ ಸಂದೇಶ ಬರಲಿದೆ ಎಂದರು.
ಎರಡು ವರ್ಷಗಳ ಕೆಲಸ ನಿಮಗೆ ತೃಪ್ತಿ ತಂದಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಿಮಗೆ(ಮಾಧ್ಯಮದವರಿಗೆ) ತೃಪ್ತಿ ತಂದಿದ್ರೆ ಸಾಕು ಎಂದು ನಗುನಗುತ್ತಲೇ ತೆರಳಿದರು.
ಅತಿವೃಷ್ಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಜಲಾಶಯಗಳು ಭರ್ತಿಯಾಗಿದ್ದು, ಬೆಳಗಾವಿಯಲ್ಲಿ ಹೆಚ್ಚು ಹಾನಿಗೊಳಗಾಗಿದೆ. ಹಾಗಾಗಿ ಸಂತ್ರಸ್ತರ ಭೇಟಿಗೆ ತೆರಳುತ್ತಿದ್ದೇನೆ. ಕಳೆದ ಎರಡು ದಿನಗಳಿಂದ ಮಳೆ ಸ್ಪಲ್ಪ ಕಡಿಮೆ ಆಗಿದೆ. ಮೂರ್ನಾಲ್ಕು ದಿನಗಳಲ್ಲಿ ಮಳೆ ಪ್ರಮಾಣ ಇಳಿಮುಖವಾದ್ರೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. ಮಹಾರಾಷ್ಟ್ರದಲ್ಲಿ ಕೂಡ ಮಳೆ ಪ್ರಮಾಣ ಕಡಿಮೆ ಆಗಿದೆ ಎಂದರು.