ಬೆಳಗಾವಿ: ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಟ್ ಕರ್ಫ್ಯೂ ವಿಸ್ತರಣೆ ಬಗ್ಗೆ ನಾಳೆ ಅಥವಾ ನಾಡಿದ್ದು ತೀರ್ಮಾನ ಮಾಡುತ್ತೇವೆ. ಕೋವಿಡ್ ಯಾವ ರೀತಿ ಹರಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ವಿಶೇಷವಾಗಿ ಬೆಂಗಳೂರಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಾಣು ಹಬ್ಬುತ್ತಿದೆ. ಇವೆಲ್ಲವನ್ನೂ ಗಮನಿಸಿ ತೀರ್ಮಾನ ಮಾಡುತ್ತೇವೆ. ಸಚಿವ ಆರ್.ಅಶೋಕ್ ಲಾಕ್‌ಡೌನ್ ಬಗ್ಗೆ ಮಾತನಾಡಿದ್ದಾರೆ. ಆದರೆ ನಮ್ಮ ನಿಲುವು ಬಹಳ ಸ್ಪಷ್ಟ ಇದೆ, ಹಿಂದೆಲ್ಲ ಲಾಕ್‌ಡೌನ್ ಆಗಿತ್ತು. ಅದು ಆಗಬಾರದು ಅಂತ ಈಗ ಕಟ್ಟುನಿಟ್ಟಿನ ತೀರ್ಮಾನ ಕೈಗೊಂಡಿದ್ದೇವೆ. ಜನರು ಅದಕ್ಕೆ ಸಹಕಾರ ಕೊಟ್ಟರೆ ಲಾಕ್‌ಡೌನ್ ಆಗಲ್ಲ. ಆರ್.ಅಶೋಕ್ ಹೇಳಿದ ಅರ್ಥವೇ ಇದು. ಜನ ಸಹಕಾರ ಕೊಟ್ರೆ ಲಾಕ್‌ಡೌನ್ ಆಗಲ್ಲ ಎಂದರು.
ಗಡಿಯಲ್ಲಿ ಕಟ್ಟೆಚ್ಚರ:
ಕಳೆದ ಒಂದು ವಾರದಿಂದ ಇಡೀ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಅದರಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಕೇಸ್ ಬರುತ್ತಿವೆ. ಮುಂಬೈ ಜೊತೆ ಒಡನಾಟ ಹೆಚ್ಚಿರೋದ್ರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲು ಸೂ
ಚನೆ ಕೊಟ್ಟಿದ್ದೇವೆ. ಎರಡು ಡೋಸ್ ವ್ಯಾಕ್ಸಿನ್ ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ಇರಲಿದೆ. ಬೆಳಗಾವಿ ಜೊತೆ ಅಕ್ಕ ಪಕ್ಕದ ಚೆಕ್‌ಪೋಸ್ಟ್ ಬಿಗಿಗೊಳಿಸಲು ಸೂಚನೆ ನೀಡಲಾಗಿದೆ. ವಿಜಯಪುರ ಜಿಲ್ಲೆ ಸೇರಿ ಇನ್ನಿತರ ಗಡಿ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ಮಾಡಿದ್ದಾರೆ. ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿಯೂ ಆಗಬೇಕು. ಕೆಲವು ಪ್ರಯಾಣಿಕರಿಗೆ ತೊಂದರೆ ಆಗಬಹುದು, ಆದ್ರೆ ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಆಗಿದೆ ಎಂದು ತಿಳಿಸಿದರು.
ಕೇವಲ ನಿರ್ಬಂಧ ಅಷ್ಟೇ ಅಲ್ಲ, ನಾವು ಪೂರ್ವ ತಯಾರಿ ಮಾಡಬೇಕಿದೆ. ಕಳೆದ ಬಾರಿ ಆಕ್ಸಿಜನ್ ಅಭಾವ ಆಗಿತ್ತು. ಈ ಸಲ ಹಾಗಾಗದಂತೆ ಕ್ರಮ ವಹಿಸಲಾಗಿದೆ. ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಪ್ಲಾಂಟ್ ರೆಡಿ ಇಟ್ಟುಕೊಳ್ಳಲು ಹೇಳಿದ್ದೇನೆ. ಹೆಚ್ಚುವರಿ ಬೆಡ್, 4 ಸಾವಿರಕ್ಕೂ ಹೆಚ್ಚು ಐಸಿಯು ಬೆಡ್ ನಿರ್ಮಿಸಲು ತೀರ್ಮಾನಿಸಿದ್ದೇವೆ. ಔಷಧಿ ಇಂಡೆಂಟ್ ಹಾಕಿ ಸಿದ್ಧತೆಗೆ ಸೂಚನೆ ಕೊಟ್ಟಿದ್ದೇವೆ. ನಾಳೆಯಿಂದ 15 ರಿಂದ 18 ವರ್ಷದ ಮಕ್ಕಳಿಗೆ ಅತ್ಯಂತ ಶಿಸ್ತಿನಿಂದ ವ್ಯಾಕ್ಸಿನೇಷನ್ಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
(ಇದನ್ನೂ ಓದಿ: ತಜ್ಞರ ಸಲಹಾ ಸಮಿತಿ ವರದಿಯಲ್ಲಿ ಲಾಕ್‌ಡೌನ್ ಪ್ರಸ್ತಾಪ.. ರಾಜ್ಯಕ್ಕೆ ಮತ್ತೊಮ್ಮೆ ಬೀಳುತ್ತಾ ಬೀಗ?)