ಬೆಳಗಾವಿ: ವಾಯವ್ಯ ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಸಮಾಧಾನ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣೆ ಅಖಾಡಕ್ಕಿಳಿದಿದ್ದಾರೆ.
ಇಂದು ಬೆಳಗಾವಿಗೆ ಸಿಎಂ ಆಗಮಿಸುತ್ತಿದ್ದಂತೆ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಭೇಟಿ ಮಾಡಿದರು. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಪ್ರಭಾಕರ ಕೋರೆ ನಿವಾಸಕ್ಕೆ ಭೇಟಿ ನೀಡಿದ ಬೊಮ್ಮಾಯಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಾಥ್ ನೀಡಿದರು.
ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಕೆಎಲ್ಇ ಸಂಸ್ಥೆಯ ಮತಗಳೇ ನಿರ್ಣಾಯಕವಾಗಿವೆ. ಮೂರು ಜಿಲ್ಲೆಯಲ್ಲಿ 95 ಶಿಕ್ಷಣ ಸಂಸ್ಥೆ ಹೊಂದಿರುವ ಕೆಎಲ್ಇ ಸಂಸ್ಥೆ ಒಟ್ಟು 3 ಸಾವಿರ ಶಿಕ್ಷಕ ಮತಗಳನ್ನು ಹಾಗೂ 5 ಸಾವಿರ ಪದವೀಧರ ಮತದಾರರನ್ನು ಹೊಂದಿದೆ. ಕೆಎಲ್ಇ ಸಂಸ್ಥೆಯ ಮತಗಳ ಮೇಲೆ ಸಿಎಂ ಬೊಮ್ಮಾಯಿ ಕಣ್ಣಿಟ್ಟಿದ್ದು, ದಿಢೀರ್ ಪ್ರಭಾಕರ ಕೋರೆ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಉಪಾಹಾರದ ಜೊತೆಗೆ ಕೋರೆ ಅವರನ್ನು ಸಿಎಂ ಮನವೊಲಿಸಿದರು ಎಂದು ಮೂಲಗಳಿಂದ ತಿಳಿದು ಬಂದಿದೆ.
ಚುನಾವಣಾ ಪ್ರಚಾರ ಕಣದಿಂದ ಪ್ರಭಾಕರ ಕೋರೆ ದೂರ ಉಳಿದಿದ್ದರು. ರಾಜ್ಯಸಭೆಗೆ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ನಾಯಕರ ಜೊತೆ ಅಸಮಾಧಾನಗೊಂಡಿದ್ದರು. ಪುತ್ರಿ ಪ್ರೀತಿಗೂ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಕೋರೆ ಟಿಕೆಟ್ ಕೇಳಿದ್ದರು. ತಮಗೂ ಹಾಗೂ ಪುತ್ರಿಗೆ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡ ಕೋರೆ, ಪರಿಷತ್ ಚುನಾವಣಾ ಪ್ರಚಾರ ಕಣದಿಂದ ದೂರ ಉಳಿದಿದ್ದರು. ಆದರೆ, ಪದವೀಧರ ಚುನಾವಣೆಯಲ್ಲಿ ಪ್ರಭಾಕರ ಕೋರೆ, ಕೆಎಲ್ಇ ಪಾತ್ರ ನಿರ್ಣಾಯಕವಾಗಲಿದೆ. ಈ ಕಾರಣಕ್ಕೆ ಸಿಎಂ ಬೆಳಗಾವಿಗೆ ಬರುತ್ತಿದ್ದಂತೆ ನೇರವಾಗಿ ಕೋರೆ ಮನೆಗೆ ಭೇಟಿ ನೀಡಿ, ಮನವೊಲಿಸಿದರು.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ: ಸಿಎಂ ಬೊಮ್ಮಾಯಿ ವಿಶ್ವಾಸ