ಅಥಣಿ (ಬೆಳಗಾವಿ): ಸೋಮವಾರ ಸಂಜೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ಡಿಸಿಎಂ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿಯವರ ಕಾರು ಅಪಘಾತವಾಗಿ ಓರ್ವ ರೈತ ಸಾವನ್ನಪ್ಪಿದ ಘಟನೆ ಕುರಿತು ಚಿದಾನಂದ ಸವದಿ ಗೆಳೆಯ ಹಾಗೂ ಪ್ರತ್ಯಕ್ಷದರ್ಶಿ ಸುಶೀಲ್ ಕುಮಾರ್ ಪತ್ತಾರ ಮಾಹಿತಿ ನೀಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಶೀಲ್ ಕುಮಾರ್, ಚಿದಾನಂದ ಸವದಿಯವರು ಅಪಘಾತವಾದ ಕಾರಿನಲ್ಲಿರಲಿಲ್ಲ. ಅವರು ಮುಂದಿನ ಕಾರಿನಲ್ಲಿದ್ದರು. ಅಪಘಾತವಾದ ಕಾರಿಗೂ, ಅವರಿದ್ದ ಕಾರಿಗೂ ಸುಮಾರು 40 ಕಿ.ಮೀ ಅಂತರವಿತ್ತು. ಅಪಘಾತ ಸಂಭವಿಸಿದ ಕಾರಿನಲ್ಲಿ ನಾನೂ ಇದ್ದೆ. ನಾವು ಹಿಂದೆ ಚಹಾ ಕುಡಿಯಲು ಇಡಕಲ್ ಅಲ್ಲಿ ಇಳಿದುಕೊಂಡಿದ್ದೆವು. ಹಾಗಾಗಿ ನಮಗೂ ಅವರಿಗೂ ಅಂತರ ಇತ್ತು ಎಂದಿದ್ದಾರೆ.
ನಾವು ಅಂಜನಾದ್ರಿ ಕಡೆಯಿಂದ ವಿಜಯಪುರ ಕಡೆಗೆ ಹೊರಟಿದ್ದೆವು. ಕೂಡಲಸಂಗಮ ಕ್ರಾಸ್ ಬಳಿ ಎಡಗಡೆಯಿಂದ ಬೈಕ್ ಸವಾರ ದಿಢೀರ್ ಆಗಿ ಅಡ್ಡ ಬಂದ. ನಮ್ಮ ಡ್ರೈವರ್ ಹನುಮಂತ ಆತನನ್ನು ಉಳಿಸಲು ಪ್ರಯತ್ನಿಸಿದ. ಆದರೂ ಅಪಘಾತ ಸಂಭವಿಸಿತು. ನಾನು ತಕ್ಷಣವೇ ಆ್ಯಂಬುಲೆನ್ಸ್ಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಜೊತೆಗೆ ನಾವೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಹುನಗುಂದ ಬಳಿ ಕಾರು ಅಪಘಾತ ಪ್ರಕರಣ: ಘಟನೆ ಬಗ್ಗೆ ಚಿದಾನಂದ ಸವದಿ ಹೇಳಿದ್ದಿಷ್ಟು