ಬೆಳಗಾವಿ : ದೇಶಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹಾನ್ ನಾಯಕರಿಗೆ ಯಾರು ಅಪಮಾನ ಮಾಡಬಾರದು. ಮೂರ್ತಿ ವಿರೂಪಗೊಳಿಸುವುದು ಕೆಟ್ಟ ಕೆಲಸ. ಅದಕ್ಕೆ ಯಾರು ಕೈ ಹಾಕಬೇಡಿ ಎಂದು ಜಗದ್ಗುರು ಶ್ರೀ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಶಿವಾಜಿ ಮಹಾರಾಜರಿಗೆ ಅವಮಾನ ಆಗ್ತಿದೆ. ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಆಗ್ತಿದೆ. ಇದು ನಿಜಕ್ಕೂ ಖಂಡನೀಯ. ದೇಶಕ್ಕೋಸ್ಕರ ರಾಯಣ್ಣ, ಶಿವಾಜಿ ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದಾರೆ. ಅವರು ನಮಗೆಲ್ಲ ಆದರ್ಶ. ಅವರಿಬ್ಬರ ಮೂರ್ತಿಗೆ ಅಪಮಾನವನ್ನ ಯಾರು ಮಾಡಬಾರದು. ಅಭಿವೃದ್ಧಿ ದೃಷ್ಟಿಯಿಂದ ಹೋರಾಟ ಮಾಡಿ. ಆದ್ರೆ, ಇಂತಹ ಕೆಟ್ಟ ಕೆಲಸಕ್ಕೆ ಕೈ ಹಾಕಬೇಡಿ ಎಂದು ಶ್ರೀಗಳು ಕಿವಿ ಮಾತು ಹೇಳಿದರು.
ಶಾಂತಿ ಸ್ಥಾಪನೆಗೆ ಡಿಸಿಗೆ ಮನವಿ
ರಾಷ್ಟ್ರೀಯ ಮಹಾಪುರುಷರ ಪ್ರತಿಮೆಗೆ ಅಪಮಾನ ಕೃತ್ಯವನ್ನು ನಾವು ಖಂಡಿಸುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿ ಮರಾಠಿಗರು ಹಾಗೂ ಕನ್ನಡಿಗರ ನಡುವೆ ಸಾಮರಸ್ಯ ಇದೆ. ಅದು ಕೆಲವೊಮ್ಮೆ ಕೆಡುತ್ತದೆ. ಇದರ ಲಾಭವನ್ನು ಕೆಲವರು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಾಕಷ್ಟು ಅಹಿತಕರ ಘಟನೆಗಳು ನಡೆಯುತ್ತವೆ. ಜಿಲ್ಲಾಡಳಿತ ಇಂತಹ ಕೃತ್ಯಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಾಮಾಜಿಕ ಸಾಮರಸ್ಯ ವೇದಿಕೆ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.