ಬೆಳಗಾವಿ: ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಉಪಚುನಾವಣೆ ನಡೆಯಲಿದೆ. ಒಂದೇ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯನ್ನು ಲಕ್ಷ್ಮಣ ಸವದಿ, ಸಚಿವ ಉಮೇಶ ಕತ್ತಿ ಹಾಗೂ ಜಾರಕಿಹೊಳಿ ಬ್ರದರ್ಸ್ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಜಿಲ್ಲಾ ಕಮಲ ನಾಯಕರ ಮಧ್ಯೆ ಬಣ ರಾಜಕೀಯ ಶುರುವಾಗಿದೆ.
ಬಿಜೆಪಿಯಲ್ಲೇ ಇರುವ ಕತ್ತಿ ಸಹೋದರರು, ಜೊಲ್ಲೆ ದಂಪತಿ, ಲಕ್ಷ್ಮಣ ಸವದಿ ಹಾಗೂ ಪ್ರಭಾಕರ ಕೋರೆ ಒಂದು ಬಣವಾದರೆ ಇತ್ತ ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದಾರೆ. ಒಂದು ಸ್ಥಾನ ಪಡೆಯಲು ಜಿಲ್ಲೆಯ ಘಟಾನುಘಟಿ ನಾಯಕರು ಪಣತೊಟ್ಟಿದ್ದು, ಚುನಾವಣೆ ರಂಗು ಪಡೆದಿದೆ.
ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕ್ಷೇತ್ರದಿಂದ ಲಕ್ಷ್ಮಣ ಸವದಿ ಆಪ್ತ ಅಶೋಕ ಅವಕ್ಕನವರ ಈ ಹಿಂದೆ ಆಯ್ಕೆ ಆಗಿದ್ದರು. ಆದರೆ, ಅವರ ಅಕಾಲಿಕ ನಿಧನದಿಂದ ಇದೀಗ ಉಪಚುನಾವಣೆ ಎದುರಾಗಿದ್ದು, ಅಶೋಕ ಅವರ ಪುತ್ರ ಸಂಜು ಅವಕ್ಕನವರ ಸವದಿ ಬಣದಿಂದ ಕಣಕ್ಕಿಳಿದಿದ್ದಾರೆ. ಇತ್ತ ಬಾಲಚಂದ್ರ ಜಾರಕಿಹೊಳಿ ಇಬ್ಬರು ಆಪ್ತರನ್ನು ಕಣಕ್ಕಿಳಿಸಿದ್ದಾರೆ. ರಾಮದುರ್ಗದ ಫತೇಸಿಂಹ್ ಜಗಪಾತ್, ಮುನವಳ್ಳಿಯ ರವೀಂದ್ರ ಯಳಿಗಾರ ಜಾರಕಿಹೊಳಿ ಬಣದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮಡಿಕೇರಿಯಲ್ಲಿ ದೈವ ಕೋಲ ಉತ್ಸವ: ಅಪರೂಪದ ಆಚರಣೆಗೆ ಹರಿದು ಬಂದ ಭಕ್ತಸಾಗರ
ಜಿಲ್ಲೆಯ ಹತ್ತು ತಾಲೂಕಿನ ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘದ ತಲಾ ಒಬ್ಬ ನಿರ್ದೇಶಕರು ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಬೆಳಗ್ಗೆ 11ಗಂಟೆಯಿಂದ 4 ಗಂಟೆಯವರೆಗೆ ಡಿಸಿಸಿ ಬ್ಯಾಂಕ್ ನಲ್ಲಿ ಈ ಚುನಾವಣೆಯ ಮತದಾನ ನಡೆಯಲಿದೆ. ಬೆಳಗಾವಿ ನಾಯಕರು ಈ ಚುನಾವಣೆಯನ್ನು ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.