ಬೆಳಗಾವಿ: ಕರ್ನಾಟಕವನ್ನು ಕಾಂಗ್ರೆಸ್ನ ಎಟಿಎಂ ಮಾಡಲು ಅವಕಾಶ ನೀಡಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗುಡುಗಿದರು. ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಗೆದ್ದು ಇಡೀ ದೇಶ ನಡೆಸಲು ಕಾಂಗ್ರೆಸ್ ಪ್ಲಾನ್ ಹಾಕಿಕೊಂಡಿದೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲು ನಾವು ಬಿಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ನೆಲ ಕಚ್ವುತ್ತಿದೆ. ಪಂಚ ರಾಜ್ಯ ಚುನಾವಣೆಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ದೇಶದ ಜನರು ಬಿಜೆಪಿ ಜತೆಗೆ ಇದ್ದಾರೆ ಎಂಬುದು ಸಾಬೀತಾಗಿದೆ. ಬಡವರು, ರೈತರು, ಕಾರ್ಮಿಕರಿಗಾಗಿ ಪ್ರಧಾನಿ ಮೋದಿ ಒಳ್ಳೆಯ ಯೋಜನೆ ತರುತ್ತಿದ್ದಾರೆ. ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಜನರು ಮೆಚ್ಚುತ್ತಿದ್ದಾರೆ. ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ನೇತೃತ್ವದಲ್ಲಿ ಮುಂದಿನ ಚುನವಣೆ ನಡೆಯಲಿದೆ. ಬಿಎಸ್‌ವೈ ಮಾರ್ಗದರ್ಶನದಲ್ಲಿ ಬೊಮ್ಮಾಯಿ ಸರ್ಕಾರ ಒಳ್ಳೆಯ ಆಡಳಿತ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಂಗ್ರೆಸ್ನ ಸದ್ಯದ ನೇತೃತ್ವ ಅವರ ಕಾರ್ಯಕರ್ತರಿಗೆ ಸ್ಫೂರ್ತಿದಾಯಕವಾಗಿಲ್ಲ. ರಾಹುಲ್ ನೇತೃತ್ವದಿಂದ ಅವರ ಕಾರ್ಯಕರ್ತರಿಗೆ ಯಾವುದೇ ಸ್ಫೂರ್ತಿ ಸಿಗುತ್ತಿಲ್ಲ. ಕರ್ನಾಟಕದ ಕಾಂಗ್ರೆಸ್ ನೇತೃತ್ವವೂ ಉತ್ತಮವಾಗಿಲ್ಲ. ಕರ್ನಾಟಕ ಕಾಂಗ್ರೆಸ್ ಇದೀಗ ಒಡೆದ ಮನೆಯಾಗಿದೆ. ಬಿಜೆಪಿ ವಿರುದ್ಧ ಮಾತನಾಡಲು ಅವರ ಬಳಿ ಯಾವ ವಿಷಯವೂ ಇಲ್ಲ. ಕರ್ನಾಟಕದಲ್ಲಿ ಕೇಂದ್ರ-ರಾಜ್ಯ ಸರ್ಕಾರ ಒಳ್ಳೆಯ ಅಭಿವೃದ್ಧಿ ಯೋಜನೆ ಜಾರಿಗೆ ತರುತ್ತಿದೆ ಎಂದರು.
ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಮಾಡಿರುವ ಆರೋಪವನ್ನು ಅಲ್ಲಗಳೆದ ಅರುಣ್ ಸಿಂಗ್, ನಮ್ಮ ಸರ್ಕಾರದಲ್ಲಿ ಯಾವ ಸಚಿವರೂ ಭ್ರಷ್ಟರಿಲ್ಲ. ಈಶ್ವರಪ್ಪ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರಳಿಲ್ಲ ಎಂದರು. ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಬಗೆಹರಿಸದ ಸಮಸ್ಯೆಗಳನ್ನು ನಾವು ಬಗೆಹರಿಸುತ್ತಿದ್ದೇವೆ. ಹಂತ ಹಂತವಾಗಿ ಅಂತಾರಾಜ್ಯ ಜಲವಿವಾದಗಳನ್ನು ಇತ್ಯರ್ಥಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಎಸ್‌ವೈ ಸರ್ವೋಚ್ಚ ನಾಯಕ: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲೇ ರಾಜ್ಯ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಬಿ.ಎಸ್.ಯಡಿಯೂರಪ್ಪ 'ಕರ್ನಾಟಕ ಬಿಜೆಪಿ ಸರ್ವೋಚ್ಚ ನಾಯಕ'. ಬಸವರಾಜ ಬೊಮ್ಮಾಯಿ ನಮ್ಮ ಸಿಎಂ ಆಗಿದ್ದು, ಸರ್ಕಾರ ನಡೆಸುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನ ಸಿಗುತ್ತಿದ್ದು, ಅದರ ಆಧಾರದಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದರು.
ಜಾತಿ ವಿಭಜನೆಗೆ ಕಾಂಗ್ರೆಸ್ ಯತ್ನ: ಚುನಾವಣೆ ಸಮೀಪಿಸುತ್ತಿರುವುದರಿಂದ ಜಾತಿ ಜಾತಿಗಳ ವಿಭಜನೆಗೆ ಕಾಂಗ್ರೆಸ್ ಯತ್ನಿಸುತ್ತಿದೆ. ಹಿಜಾಬ್ ವಿವಾದ ಕಾಂಗ್ರೆಸ್ ಪಕ್ಷದ ಬೆಂಬಲದಿಂದಲೇ ಆಗುತ್ತಿದೆ. ಎಸ್‌ಡಿಪಿಐ, ಪಿಎಫ್ಐಗೆ ಹಿಂಬದಿಯ ಬೆಂಬಲ ನೀಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಪಿಎಫ್ಐಗೆ ಬೆಂಬಲ ನೀಡಿದ್ದರು. ಈಗ ವಿಪಕ್ಷದಲ್ಲಿದ್ದರೂ ಪಿಎಫ್ಐಗೆ ಬೆಂಬಲಿಸುತ್ತಿದ್ದಾರೆ. ಜಾತಿ ಜಾತಿಗಳನ್ನು ವಿಭಜಿಸುವ ಕೆಲಸವನ್ನು ಕಾಂಗ್ರೆಸ್ ಎಲ್ಲೆಡೆ ಮಾಡುತ್ತಿದೆ. ರಾಜಸ್ಥಾನದಲ್ಲಿಯೂ ಸಹ ಇದನ್ನೇ ಮಾಡುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ವುತ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಈಶ್ವರಪ್ಪನವರನ್ನು ಮಾತ್ರ ವಜಾ ಮಾಡೋದಲ್ಲ ಮುಖ್ಯಮಂತ್ರಿಯೇ ರಾಜೀನಾಮೆ ಕೊಡಬೇಕು: ಸುರ್ಜೆವಾಲಾ