ಬೆಳಗಾವಿ: ಡಿಸಿಎಂ ನೇಮಕ ಸಂವಿಧಾನಬಾಹಿರ, ಹೀಗಾಗಿ ಹೊಸ ಸಂಪುಟ ರಚನೆ ವೇಳೆ ಉಪಮುಖ್ಯಮಂತ್ರಿಗಳನ್ನು ನೇಮಿಸದಂತೆ ಆರ್ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ.
ಡಿಸಿಎಂಗಳ ನೇಮಕಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಒಂದು ವೇಳೆ, ಡಿಸಿಎಂಗಳ ನೇಮಕ ಮಾಡಿದ್ರೆ ಕೋರ್ಟ್ ಮೊರೆ ಹೋಗಿ ತಡೆ ತರುತ್ತೇನೆ. ಡಿಸಿಎಂ ಹುದ್ದೆ ಸೃಷ್ಟಿಗೆ ಸಂವಿಧಾನದ ಪರಿಚ್ಚೇಧ 163, 164ರಲ್ಲಿ ಉಲ್ಲೇಖವಿಲ್ಲ. ಈ ಕುರಿತು ಸರ್ಕಾರದ ಬಳಿಯೂ ಸಮರ್ಪಕ ಮಾಹಿತಿ ಇಲ್ಲ. ಡಿಸಿಎಂ ನೇಮಕಾತಿ ಸಾಂಪ್ರದಾಯಿಕವಾಗಿ ನಡೆದು ಬಂದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದಾರೆ ಎಂದರು.
ಸರ್ಕಾರ ಸಂವಿಧಾನದ ಪರವಾಗಿ ನಡೆಯುತ್ತದೆಯೋ? ಅಥವಾ ಸಾಂಪ್ರದಾಯಿಕವಾಗಿ ನಡೆಯುತ್ತದೆಯೋ ತಿಳಿಸಿಸಬೇಕು. ಈ ಕುರಿತು ರಾಜ್ಯಪಾಲರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೇಲ್ ಮಾಡಿ ಮನವಿ ಮಾಡಿದ್ದೇನೆ. ಪ್ರತಿಯೊಂದು ಜಾತಿಯಲ್ಲೂ ಒಬ್ಬಬ್ಬರನ್ನು ಡಿಸಿಎಂ ಮಾಡಿ, ಅದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ, ಸಾಂವಿಧಾನಿಕವಾಗಿ ಸರ್ಕಾರ ನಡೆಯುತ್ತದೋ, ಸಾಂಪ್ರದಾಯಿಕವಾಗಿ ನಡೆಯುತ್ತದೋ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸಾಂಪ್ರದಾಯಿಕವಾಗಿ ಸರ್ಕಾರ ನಡೆಯುತ್ತಿದ್ದರೆ ರಾಜ್ಯಕ್ಕೆ ಇಬ್ಬರು ಸಿಎಂಗಳನ್ನು ನೇಮಿಸಬೇಕು. ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಒಬ್ಬ ಸಿಎಂ ಅವರನ್ನು ಆಯ್ಕೆ ಮಾಡಿ, ಬೆಂಗಳೂರು ವಿಧಾನಸೌಧಕ್ಕೆ ಒಬ್ಬ ಸಿಎಂ ಅವರನ್ನು ಆಯ್ಕೆ ಮಾಡಬೇಕು. ಡಿಸಿಎಂ ನೇಮಕ ಮಾಡುವುದಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ನೇಮಕ ಮಾಡಬೇಕು. ಡಿಸಿಎಂಗಳ ನೇಮಕಾತಿಗೆ ಸಂವಿಧಾನದಲ್ಲಿ ಅವಕಾಶ ಇಲ್ಲ. ಒಂದು ವೇಳೆ ಸಾಂಪ್ರದಾಯಿಕವಾಗಿ ನೇಮಕವಾದರೆ ಇಬ್ಬರು ಸಿಎಂಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.