ಬೆಳಗಾವಿ: ಮಂಗಳಾ ಅಂಗಡಿ ದೊಡ್ಡ ಅಂತರದಿಂದ ಗೆಲುವು ಸಾಧಿಸುವುದು ನೂರಕ್ಕೆ ನೂರು ನಿಶ್ಚಯ. ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇಲ್ಲದಿದ್ದರೂ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದಿ. ಸುರೇಶ್ ಅಂಗಡಿ ಅವರ ಶ್ರೀಮತಿ ಚುನಾವಣೆಗೆ ನಿಂತರೆ ನಾವು ಯಾರು ಸ್ಪರ್ಧೆ ಮಾಡಲ್ಲ ಅಂತಾ ಕಾಂಗ್ರೆಸ್‌ನವರು ಹೇಳಿದ್ದರು. ಸುರೇಶ್ ಅಂಗಡಿಗೆ ಗೌರವ ಕೊಡಬೇಕು ಅನ್ಸಿದ್ರೆ ಕಾಂಗ್ರೆಸ್‌ನವರು ಸ್ಪರ್ಧೆ ಮಾಡಲ್ಲ ಅಂತ ಭಾವಿಸಿದ್ದೆ. ಆದರೆ ಸುರೇಶ್ ಅಂಗಡಿಯವರನ್ನು ಗೆಲ್ಲಿಸಿದಂತೆ ಮಂಗಳಾ ಅಂಗಡಿಯವರನ್ನು ಗೆಲ್ಲಿಸುತ್ತೇವೆ ಅಂತ ಬೆಳಗಾವಿ ಜಿಲ್ಲೆಯ ಮತದಾರರು ತೀರ್ಮಾನ ಮಾಡಿದ್ದಾರೆ. ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತ ನೀಡುತ್ತಾರೆ ಎಂದು ನಂಬಿದ್ದೇನೆ ಎಂದರು.
ಕಾಂಗ್ರೆಸ್‌ನವರು ಈ ದೇಶವನ್ನು ಹಾಳು ಮಾಡಿದ್ದಾರೆ. ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿದ್ದರೂ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿದ್ದೇವೆ. ಮಂಗಳಾ ಅಂಗಡಿ ಎಂಪಿ ಆದ ಮೇಲೆ ಬೆಳಗಾವಿ ಜಿಲ್ಲೆಗೆ ಏನು ಬೇಕು ಅದನ್ನು ಮಾಡಿಕೊಡುತ್ತೇನೆ. ಯಡಿಯೂರಪ್ಪ ಒಂದು ಬಾರಿ ಮಾತು ಕೊಟ್ಟರೆ ಹಿಂದೆ ಸರಿಯುವ ಮಾತಿಲ್ಲ, ಇನ್ನು ಎರಡು ವರ್ಷದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂದು ಪ್ರಯತ್ನ ಮಾಡ್ತಿದ್ದೇವೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಸಜ್ಜನ, ಕ್ರಿಯಾಶೀಲ, ಸ್ವಚ್ಛ ಹಾಗೂ ಪ್ರಾಮಾಣಿಕವಾಗಿದ್ದ ಸುರೇಶ ಅಂಗಡಿ ಜನರ ಬಗ್ಗೆ ಕಾಳಜಿ ಇರುವ ಏಕೈಕ ರಾಜಕಾರಣಿಯಾಗಿದ್ದರು. ಅವರು ನೂರು ವರ್ಷಗಳ ಕಾಲ ಮಾಡಬೇಕಿದ್ದ ಕಾರ್ಯವನ್ನು ಒಂದೇ ವರ್ಷದಲ್ಲಿ ಮಾಡಿದ್ದಾರೆ. ಹೀಗಾಗಿ ಮಂಗಳ ಅಂಗಡಿಗೆ ಮತ ನೀಡಬೇಕು. ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಬೇಕು. ಎಪ್ಪತ್ತು ವರ್ಷದಲ್ಲಿ ಕಾಂಗ್ರೆಸ್ ಮೂರ್ಖತನದ ಆಡಳಿತ ನಡೆಸಿದ ಪರಿಣಾಮ ಭಾರತ ಸಾಕಷ್ಟು ಭೂಮಿಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿದರು.