ಬೆಳಗಾವಿ: ಕೇಂದ್ರದ ಕೃಷಿ ಕಾಯ್ದೆಗಳ ವಿರೋಧಿಸಿ ಇಂದು ಭಾರತ್ ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ಬೆಂಬಲವಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವೇಳೆ ವೃದ್ಧೆಯೊಬ್ಬರು ಹೈಡ್ರಾಮಾ ಮಾಡಿದ್ದಾರೆ.
ನಗರದ ಚೆನ್ನಮ್ಮ ವೃತ್ತದಲ್ಲಿ ಜಿಲ್ಲೆಯ ಖಾನಾಪುರ ತಾಲೂಕಿನ ಹಟ್ಟಿಹೊಳಿ ಗ್ರಾಮದ ರೇಣುಕಾ ತಡಕೋಡ ಎಂಬ ವೃದ್ಧೆ ಕೈಯಲ್ಲಿ ರೈತ ಧ್ವಜ ಹಿಡಿದು ಹೋರಾಟಕ್ಕೆ ಆಗಮಿಸಿದ್ದರು. ಈ ವೇಳೆ ಸವದತ್ತಿಯ ರೇಣುಕಾದೇವಿ ತನ್ನ ಮೈಮೇಲೆ ಬಂದಿದ್ದಾಳೆ ಎಂದು ಹೈಡ್ರಾಮಾ ಮಾಡಿದ್ದಾರೆ. ನಮ್ಮ ಹೋರಾಟಕ್ಕೆ ತೊಂದರೆ ಕೊಟ್ಟರೆ ನಿಮ್ಮನ್ನು ಬಿಡುವುದಿಲ್ಲ ಎಂದು ಅಜ್ಜಿ ಕಿರುಚಾಡಿದ್ದಾರೆ.
ಟ್ರ್ಯಾಕ್ಟರ್‌ಗೆ ಅಡ್ಡ ಮಲಗಿ ಪ್ರತಿಭಟನೆ
ಇನ್ನು ಚೆನ್ನಮ್ಮ ವೃತ್ತದಲ್ಲಿ ಟ್ರ್ಯಾಕ್ಟರ್‌ಗೆ ಅಡ್ಡಲಾಗಿ ಮಲಗಿ ಸುರಿಯುತ್ತಿರುವ ಮಳೆಯಲ್ಲೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಟ್ರ್ಯಾಕ್ಟರ್‌ನಲ್ಲಿ ವಿವಿಧ ಹಳ್ಳಿಗಳಿಂದ ಬಂದಿರುವ ರೈತರು ಶೇತ್ಕರಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯಲು ಆಗ್ರಹಿಸಿ ಚೆನ್ನಮ್ಮ ವೃತ್ತದಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಿದ್ದಾರೆ. ಪ್ರತಿಭಟನಾನಿರತರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಿದೆ.
ಅರೆಬೆತ್ತಲೆ ಹೋರಾಟ
ಇದಕ್ಕೂ ಮುನ್ನ ಚೆನ್ನಮ್ಮ ವೃತ್ತದಲ್ಲಿ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮೋದಗಿ ನೇತೃತ್ವದಲ್ಲಿ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು. ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರು ಹಾಗೂ ಪೊಲೀಸರು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದರು.