ಬೆಳಗಾವಿ: ಕಣ್ಣಿಗೆ ಕಾಣುವ ದೇವರೆಂದರೆ ತಾಯಿ. ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ತಾಯಂದಿರ ದಿನಾಚರಣೆ ಇಂದು. ಕೊರಾನಾ ನಿಯಂತ್ರಣಕ್ಕೆ ಜಿಲ್ಲೆಯ ಹಲವು ಮಹಿಳಾ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ತಮ್ಮ ಸಣ್ಣ ಮಕ್ಕಳು-ಕುಟುಂಬಗಳಿಂದ ದೂರವಾಗಿ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಕುಟುಂಬಕ್ಕಿಂತ ಆರೋಗ್ಯಕರ ಸಮಾಜವೇ ಮುಖ್ಯ ಎನ್ನುವ ಇಂಥ ಅಧಿಕಾರಿಗಳ ಕುರಿತಾಗಿ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಸಿದ್ಧಪಡಿಸಿದ ವಿಶೇಷ ವರದಿ ಇದು.
ಎರಡು ತಿಂಗಳಿಂದ ಮಗಳನ್ನು ಅಪ್ಪಿಕೊಂಡಿಲ್ಲ!
ಬೆಳಗಾವಿ ನಗರ ಹಾಗೂ ತಾಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಬೆಳಗಾವಿ ಕಮಿಷನ್‌ರೇಟ್ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ 47 ಜನ ಸೋಂಕಿತರಿದ್ದು, ಕೊರೊನಾ ನಿಯಂತ್ರಿಸಲು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟ್ಕರ್ ಹಗಳಿರಲು ಶ್ರಮಿಸುತ್ತಿದ್ದಾರೆ.
ಐಪಿಎಸ್ ಅಧಿಕಾರಿ ಸೀಮಾ ಲಾಟ್ಕರ್ ಅವರಿಗೆ 10 ಹಾಗೂ 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೊರೊನಾದಿಂದಾಗಿ ಕಳೆದೆರಡು ತಿಂಗಳಿಂದ ತಮ್ಮ ಮಕ್ಕಳನ್ನು ಅಪ್ಪಿಕೊಳ್ಳಲಾಗದ ಪರಿಸ್ಥಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದು ನಿಮಿಷ ಅವರೊಟ್ಟಿಗೆ ಬೆರತಿಲ್ಲ. ಹಿಂಬಾಗಲಿನಿಂದ ಮನೆಗೆ ಹೋಗಿ ಪ್ರತ್ಯೇಕ ಕೊಠಡಿಯಲ್ಲಿ ಎರಡು ತಿಂಗಳಿಂದ ವಾಸವಿದ್ದಾರೆ.
ಸಾರ್ವಜನಿಕರ ರಕ್ಷಣೆಗಾಗಿ ಹೊರಗಡೆ ಕಾರ್ಯ ನಿರ್ವಹಿಸುತ್ತಿರುವ ಇವರು, ಮನೆಗೆ ಹೋದಾಕ್ಷಣ ಸೆಲ್ಫ ಕ್ವಾರಂಟೈನ್ ಆಗುತ್ತಿದ್ದಾರೆ. ಈ ಕುರಿತು ಈಟಿವಿ ಭಾರತ ಜತೆಗೆ ಮಾತನಾಡಿದ ಸೀಮಾ ಲಾಟ್ಕರ್, ಕಳೆದೆರಡು ತಿಂಗಳಿಂದ ಮಕ್ಕಳಿಂದ ದೂರವಿದ್ದೇನೆ. ಮಕ್ಕಳನ್ನು ಅಪ್ಪಿಕೊಂಡಿಲ್ಲ, ಅವರೊಟ್ಟಿಗೆ ಸಮಯ ಕಳೆದಿಲ್ಲ. ಈ ವಿಚಾರದಲ್ಲಿ ಸಾಕಷ್ಟು ಬೇಜಾರಾಗಿದೆ. ಆದರೆ, ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ನಮ್ಮ ಪಾತ್ರ ಮುಖ್ಯವಾಗಿದ್ದು ಕರ್ತವ್ಯ ಪ್ರಜ್ಞೆ ಮೆರೆಯಬೇಕಿದೆ ಎಂದು ಹೇಳಿದ್ದಾರೆ.
ಇನ್ನು ನಗರದ ಅಪರಾಧ ವಿಭಾಗದ ಡಿಸಿಪಿ ಆಗಿರುವ ಯಶೋಧಾ ವಂಟಗೂಡಿ ಅವರಿಗೂ ಒಂದೂವರೆ ವರ್ಷದ ಗಂಡು ಮಗು ಹಾಗೂ ಐದು ವರ್ಷದ ಹೆಣ್ಣು ಮಗಳಿದ್ದಾಳೆ. ಅವರೂ ಕೂಡ ಕರ್ತವ್ಯ ನಿರ್ವಹಿಸಿದ ಬಳಿಕ ಭಯದಿಂದಲೇ ಮನೆಗೆ ಹೋಗಬೇಕಾಗಿದೆ. ಹೀಗಾಗಿ ನಗರ ಹಾಗೂ ಜಿಲ್ಲೆಯ ಹಲವು ಮಹಿಳಾ ಸಿಬ್ಬಂದಿ ಕುಟುಂಬಗಳಿಂದ ದೂರವಿದ್ದು ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.
ನನಗೆ ಬಂದ ಸನ್ನಿವೇಶ ಯಾರಿಗೂ ಬಾರದಿರಲಿ...
ಬೆಳಗಾವಿ ನಗರದ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡ್‌ನಲ್ಲಿ ಕೊರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಸ್ಟಾಫ್ ನರ್ಸ್ ಸುನಂದಾ ಕೋರೆಪುರ ಅವರು 21 ದಿನ ಸೋಂಕಿತರ ಆರೈಕೆಯಲ್ಲಿ ತೊಡಗಿದ್ದರು. ಮನೆಗೆ ಹೋಗದೇ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದ ಸುನಂದಾ ಭೇಟಿ ಮಾಡಲು ಪುತ್ರಿ ಐಶ್ವರ್ಯಾ ರಸ್ತೆ ಬದಿ ನಿಂತು ಅಮ್ಮಾ ಬಾರಮ್ಮ ಎಂದು ಕಣ್ಣೀರಿಟ್ಟಿದ್ದಳು. ಈ ಘಟನೆ ಕಂಡು ರಾಜ್ಯದ ಜನರೇ ಕಣ್ಣೀರಾಗಿದ್ದರು. ಮಗಳ ರೋಧನೆ ನೋಡಲಾಗದೇ ಸುನಂದಾ ಅವರೂ ಕಣ್ಣೀರು ಹಾಕಿದ್ದರು. ಕ್ವಾರಂಟೈನ್ ಅವಧಿ ಬಳಿಕ ಮನೆಗೆ ಹೋಗಿದ್ದ ಸುನಂದಾ ಅವರನ್ನು ಪುತ್ರಿ ಓಡಿ ಬಂದು ಅಪ್ಪಿಕೊಂಡಿದ್ದಳು.
ಈ ಕುರಿತು ಈಟಿವಿ ಭಾರತ ಜತೆಗೆ ಅನುಭವ ಹಂಚಿಕೊಂಡ ಸನಂದಾ ಕೋರೆಪುರ ಅವರು, ನನಗೆ ಬಂದ ಪರಿಸ್ಥಿತಿ ಯಾವ ತಾಯಿಗೂ ಬರಬಾರದು. 21 ದಿನ ಮಗಳಿಂದ ದೂರ ಇದ್ದೆ. ಈ ಸಮಯದಲ್ಲಿ ನನಗಾದ ಬೇಸರ, ನೋವು ಹೇಳತೀರದು. ಆದರೂ ಸೋಂಕಿತರ ಆರೈಕೆ ಮಾಡಿ ನನ್ನ ಕರ್ತವ್ಯ ನಿರ್ವಹಿಸಿದೆ. ರಾಜ್ಯದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಫೋನ್ ಮಾಡಿದ್ದರಿಂದ ಆತ್ಮಸ್ಥೈರ್ಯ ಹೆಚ್ಚಿತ್ತು. ಈಗ ಎಮರ್ಜೆನ್ಸಿ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಕುಟುಂಬ, ಮಕ್ಕಳು, ವೈಯಕ್ತಿಕ ಜೀವನ ಬದಿಗಿಟ್ಟು ಕೊರೊನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿಜವಾದ ತಾಯಂದಿರಲ್ಲವೇ?