ಬೆಳಗಾವಿ: ಬೆಳಗಾವಿ ಅಧಿವೇಶನವನ್ನು ಯಶಸ್ವಿಯಾಗಿ, ಒಳ್ಳೆಯ ರೀತಿಯಲ್ಲಿ ನಡೆಸಲಾಗಿದೆ. 10 ದಿನಗಳ ಅಧಿವೇಶನದಲ್ಲಿ ಸದಸ್ಯರ ಒಟ್ಟು ಹಾಜರಾತಿ ಶೇ.73ರಷ್ಟು ಇತ್ತು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ವಿಧಾನಸಭೆ ಕಲಾಪ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಒಟ್ಟು 40 ದಿನ ಅಧಿವೇಶನ ನಡೆಸಿದಂತೆ ಆಗಿದೆ. ಸದನದಲ್ಲಿ 150 ಸ್ಟಾರ್ಡ್ ಪ್ರಶ್ನೆಗಳ ಪೈಕಿ 149 ಪ್ರಶ್ನೆಗಳಿಗೆ ಉತ್ತರ ನೀಡಿದ್ದೇವೆ. ಸದನವನ್ನು ಚೆನ್ನಾಗಿ ನಡೆಸುವ ಉದ್ದೇಶದಿಂದ ಎಲ್ಲರೂ ಭಾಗವಹಿಸಿದ್ದಾರೆ.
ಸದನವನ್ನು ಹೆಚ್ಚು ಕಾಲ ನಡೆಸಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ. ಈ ಅಧಿವೇಶನದಲ್ಲಿ ಕೇವಲ 8 ಸದಸ್ಯರು ಮಾತ್ರ ಬಂದಿಲ್ಲ. ಅವರು ನನ್ನ ಅನುಮತಿ ಪಡಿದಿದ್ದರು. ಶೇ.73ರಷ್ಟು ಸದಸ್ಯರ ಹಾಜರಾತಿ ಇತ್ತು. ಈ ಅಂಕಿ - ಅಂಶ ನೋಡಿದರೆ ಸದಸ್ಯರ ಉತ್ಸಾಹ ತೋರಿಸುತ್ತದೆ ಎಂದರು.
5,000 ಜನ ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿದ್ದಾರೆ. ಈ ಅಧಿವೇಶನದ ಕಲಾಪ ಚೆನ್ನಾಗಿ ನಡೆದಿದೆ. ಸ್ಪೀಕರ್ ಆಗಿ ಬೆಳಗಾವಿ ಅಧಿವೇಶನ ನನ್ನ ಮೊದಲ ಅಧಿವೇಶನ. ಅಧಿಕಾರಿಗಳು ವ್ಯವಸ್ಥಿತವಾಗಿ ಅಧಿವೇಶನ ನಡೆಸಿದ್ದಾರೆ. ಆಹಾರ ವ್ಯವಸ್ಥೆಯೂ ಚೆನ್ನಾಗಿತ್ತು. ಇದರಲ್ಲಿ ಬೆಳಗಾವಿ ಜನರ ಪಾತ್ರ ದೊಡ್ಡದು. ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಇಲ್ಲಿನ ಭಾಗದ ಜನರ ಅಪೇಕ್ಷೆಗಳು ಸರ್ಕಾರಕ್ಕೆ ಗೊತ್ತಿದೆ.
ಈ ಬಾರಿ ಸದನ 52 ಗಂಟೆ ಕಾಲ ನಡೆದಿದೆ. ಹೆಚ್ಚು ಸಮಯ ಕಲಾಪ ನಡೆದಾಗ ಸದಸ್ಯರಿಗೆ ಹೆಚ್ಚು ಕಾಲ ಮಾತನಾಡಲು ಆಗುತ್ತದೆ ಎಂದು ತಿಳಿಸಿದರು. ಶಾಸಕರ ಭವನ ಆಗಬೇಕು ಎಂಬ ಅಪೇಕ್ಷೆ ಇದೆ. ಅದರ ಅಗತ್ಯನೂ ಇದೆ. ಬಿಎಸಿಯಲ್ಲೂ ಇದು ಚರ್ಚೆ ಆಗಿದೆ. ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಲುವ ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಕದ್ದುಮುಚ್ಚಿ ಮಸೂದೆ ಮಂಡನೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಸೂದೆ ಮಂಡನೆಯಾಗುವ ಮುಂಚಿನ ದಿನ ನಾನು ಕಾರ್ಯಕಲಾಪದ ನಿರ್ಣಯ ಮಾಡುತ್ತೇನೆ. ನಾನು ಅಜೆಂಡಾ ಸಿದ್ಧಪಡಿಸುವಾಗ ಆ ಬಿಲ್ ಕಾಪಿ ಬಂದಿರಲಿಲ್ಲ. ಹೀಗಾಗಿ ನಾನು ಅಜೆಂಡಾದಲ್ಲಿ ಅದನ್ನು ಹಾಕಲಿಲ್ಲ. ಊಹೆ ಮೇರೆಗೆ ಅದನ್ನು ಹಾಕಲು ಸಾಧ್ಯವಿಲ್ಲ. ಮರುದಿನ ಬಿಲ್ ಕಾಪಿ ಬಂದಿದೆ. ಆ ಮೇಲೆ ಪೂರಕ ಅಜೆಂಡಾ ಹಾಕಿದ್ದೇನೆ. ಅದಕ್ಕೆ ನಿಯಮಾವಳಿಯಲ್ಲಿ ಅವಕಾಶ ಇದೆ ಎಂದು ವಿವರಿಸಿದರು.
ಕೋರಂ ಆದ ಬಳಿಕವೇ ಬಿಲ್ ಮಂಡಿಸಲು ಅವಕಾಶ: ಸದನದಲ್ಲಿ ಕೋರಂ ಆದ ಬಳಿಕ ಸದನದಲ್ಲಿ ಬಿಲ್ ಮಂಡಿಸುವ ಪ್ರಕ್ರಿಯೆ ಮಾಡಿದ್ದೇನೆ. ಆದರೂ ಈ ಆರೋಪ ಬಗ್ಗೆ ಏನು ಹೇಳಬೇಕು ಎಂದು ಅರ್ಥ ಆಗುತ್ತಿಲ್ಲ. ಅಂದು ಮಧ್ಯಾಹ್ನ ಊಟಕ್ಕೆ ಮುಂದೂಡುವ ಮುನ್ನ ವಿಪ್ ಕರೆಸಿ ಮಧ್ಯಾಹ್ನ ಮಸೂದೆ ಮಂಡಿಸುತ್ತೇನೆ ಎಂದು ಹೇಳಿದ್ದೆ.
ಅಂದು ಪ್ರತಿಪಕ್ಷ ನಾಯಕರು ಸದನದ ಒಳಗೆ ಬರಲು ತಡ ಮಾಡಿದರು. ಆದರೂ ಈ ರೀತಿ ಆರೋಪ ಮಾಡಿದರೆ ಯಾರು ಪ್ರಬುದ್ಧರು ಎಂದು ಪ್ರಶ್ನೆ ಮಾಡಬೇಕು. ಸದನದಲ್ಲಿ ನಿಯಮಾವಳಿ ಪ್ರಕಾರ ಎಲ್ಲ ಪ್ರಕ್ರಿಯೆ ಆಗಿದೆ ಎಂದರು.
ಸಮಯದ ಇತಿಮಿತಿಯಲ್ಲಿ ಎಲ್ಲವೂ ಆಗಬೇಕು. ಹೆಚ್ಚಿನ ಕಲಾಪ ನಡೆದಿದ್ದರೆ ಚರ್ಚೆ ಆಗುತ್ತಿತ್ತು. ಸಮಯ ಹೆಚ್ಚು ಕೊಡಬೇಕಾಗಿತ್ತು. ಸಿದ್ದರಾಮಯ್ಯ ಅವರ ಚರ್ಚೆಗೆ ಒಂದು ತಾಸು ಕೊಟ್ಟಿದ್ದೇನೆ. ಅತಿವೃಷ್ಟಿ ಬಗ್ಗೆ ಅವರಿಗೆ ಹೆಚ್ಚು ಅವಕಾಶ ಕೊಟ್ಟಿದ್ದೇನೆ. ಸಮಯ ಇದ್ದಿದ್ದರೆ ಇನ್ನೂ ಸಮಯಾವಕಾಶ ಕೊಡುತ್ತಿದ್ದೆ. ಸದನ ಹೆಚ್ಚು ಕಾಲ ನಡೆಯಬೇಕು ಎಂಬುದು ಎಲ್ಲರ ಅಪೇಕ್ಷೆ. ಆದರೆ ಅದಕ್ಕೆ ತಕ್ಕುದಾದ ಕಾಲ ಕೂಡಿರಬೇಕು ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಪರಿಷತ್ನಲ್ಲಿ ಸಮಗ್ರ ಚರ್ಚೆ ನಡೆದಿದೆ: ಬಸವರಾಜ ಹೊರಟ್ಟಿ
ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನದಲ್ಲಿ ಸಮಯ ಮೀಸಲಿಟ್ಟಿದ್ದೇವೆ. ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ. ಉತ್ತರ ಕರ್ನಾಟಕ ಬಗ್ಗೆ ದಕ್ಷಿಣ ಕರ್ನಾಟಕದವರು ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಹಾಗೂ ಎಲ್ಲಾ ಸಮಸ್ಯೆ ಬೇಗನೇ ಬಗೆಹರಿಸುವುದಾಗಿ ಸಿಎಂ ಹೇಳಿದ್ದಾರೆ.
ಈ ಬಾರಿಯೂ ಕೊರೊನಾದಿಂದ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯುತ್ತಾ ಅಂತ ಚರ್ಚೆಯಾಗಿತ್ತು. ಆದರೆ ಉತ್ತರ ಕರ್ನಾಟಕ ಭಾಗದ ಸಿಎಂ, ಸಭಾಪತಿ, ಸಭಾಧ್ಯಕ್ಷರು ಇರುವುದರಿಂದ ನಾವು ಇಲ್ಲೇ ಮಾಡ್ಲೇಬೇಕು ಅಂತ ಚಳಿಗಾಲದ ಅಧಿವೇಶನ ಮಾಡಿದ್ದೇವೆ ಎಂದು ವಿವರಿಸಿದರು.
ಹೆಚ್ಚು ದಿನ ಕಲಾಪ ನಡೆಸಬೇಕು.. ಇದು ನಮ್ಮ ಆಶಯವೂ ಹೌದು
ನಾನು ಸಿಎಂ ಬಳಿ ಎರಡು ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಜಂಟಿ ಅಧಿವೇಶನ ನಡೆಸಬೇಕು ಅಥವಾ ಹೆಚ್ಚು ದಿನವಾದ್ರೂ ನಡೆಸಬೇಕು ಅಂತ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ. ಶಾಸಕರ ಭವನ ಹಾಗೂ ಸೆಕ್ರೆಟರಿ ಕಚೇರಿಯಾಗ್ಬೇಕು ಅಂತ ಪ್ರಸ್ತಾಪ ಮಾಡಿದ್ದೇವೆ. ಪರಿಷತ್ತಿನಲ್ಲಿ ಈ ಬಾರಿ 73 ಸದಸ್ಯರು ಪಾಲ್ಗೊಂಡಿದ್ರು.
ಪರಿಷತ್ ಇರಬೇಕೋ ಬೇಡ್ವೋ ಎನ್ನುವ ಬಗ್ಗೆ ಸಾಧಕ ಬಾಧಕ ಚರ್ಚಿಸಬೇಕಿದೆ. ದೇಶಕ್ಕೆ ನಮ್ಮ ಪರಿಷತ್ ಮಾದರಿಯಾಗಬೇಕು. ವಿಧಾನಸಭೆಯಲ್ಲಿ ಸೋತವರನ್ನು ಪರಿಷತ್ಗೆ ಕಳುಹಿಸೋ ಸಂಸ್ಕೃತಿ ಕಡಿಮೆ ಮಾಡಬೇಕು. ಹಿರಿಯರು ಅನುಭವಗಳನ್ನು ಕಳುಹಿಸಿ ಎಂದು ಎಲ್ಲ ಪಕ್ಷಕ್ಕೆ ಮನವಿ ಮಾಡ್ತೇವೆ. ಅನುದಾನ ಬರುತ್ತಿಲ್ಲ ಎನ್ನುವ ಶಾಸಕರ ಅಸಮಾಧಾನದ ಬಗ್ಗೆ ಸಿಎಂ ಮಾತನಾಡಿದ್ದಾರೆ.
ಪರಿಷತ್ ಚುನಾವಣೆ ಹಣ ಹಂಚಿಕೆ ಬಗ್ಗೆ ಬಹಿರಂಗವಾದಾಗ ಪರಿಷತ್ ಇರೋಬೇಕೇ ಅನ್ನೋ ಬಗ್ಗೆ ಚರ್ಚೆ ಬಂದಿತ್ತು. ಮುಂದಿನ ಅಧಿವೇಶನದ ವೇಳೆ ಇದು ಚಿಂತಕರ ಚಾವಡಿಯಾಗೋ ರೀತಿ ಮಾಡ್ತೇನೆ. ಸದನದ ಗಾಂಭೀರ್ಯತೆ ಹೆಚ್ಚಿಸಿ ಉತ್ತಮ ಶಾಸಕರ ರಚನೆಗೆ ಕೊಡುಗೆ ನೀಡಿದ ಶಾಸಕರನ್ನ ಗುರುತಿಸಿ ಅತ್ಯುತ್ತಮ ಶಾಸಕರ ಪ್ರಶಸ್ತಿ ನೀಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.