ಬೆಳಗಾವಿ: ದೂರದೃಷ್ಟಿ, ಅಭಿವೃದ್ಧಿಪರ ಯೋಜನೆಗಳು ಮತ್ತು ಜನಪರ ಕಾರ್ಯಗಳು ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಗೋಕಾಕ್ ನಗರದ ಉಪ್ಪಾರ ಗಲ್ಲಿಯಲ್ಲಿ ತಂದೆಯ ಪರವಾಗಿ ಮತಯಾಚನೆ ಮಾಡಿ, ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾತುಗಳಿಗಿಂತ ಕೃತಿ ಮೇಲು ಎಂಬತೆ ಈಗಾಗಲೇ ನಮ್ಮ ತಂದೆ ನಗರದ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಸುಧಾರಣೆ, ಶೌಚಾಲಯಗಳು, ಬೀದಿದೀಪಗಳು ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಸುಂದರ ನಗರವನ್ನಾಗಿಸಿದ್ದಾರೆ. ನೆರೆ ಹಾಗೂ ಕೋವಿಡ್-19 ಸಂದರ್ಭದಲ್ಲಿ ಅವರು ಮಾಡಿದ ಸಮಾಜಮುಖಿ ಕಾರ್ಯಗಳನ್ನು ಗಮನಿಸಿ ನಮ್ಮ ತಂದೆಯವರನ್ನು ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಜನಪ್ರತಿನಿಧಿಗಳ, ಕಾರ್ಯಕರ್ತರ ಹಾಗೂ ಸಾರ್ವಜನಿಕರ ಸಭೆ ನಡೆಸಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಆಚಾರ-ವಿಚಾರಗಳು ಇಂದಿನ ಸಮಾಜದಲ್ಲಿ ಸಾಕಷ್ಟು ಪ್ರಭಾವ ಬೀರಿವೆ. ಈ ಪ್ರಭಾವಗಳು ರಾಜ್ಯಮಟ್ಟಕ್ಕೆ ಮಾತ್ರ ಸೀಮಿತವಾಗಬಾರದು. ಸತೀಶಣ್ಣನವರ ವರ್ಚಸ್ಸನ್ನು ಹಳ್ಳಿಯಿಂದ ದಿಲ್ಲಿಯವರೆಗೆ ಪರಿಚಯಿಸಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.