ಬೆಳಗಾವಿ : ಹಿಜಾಬ್ ಧರಿಸಿ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿದ ಘಟನೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನಲ್ಲಿ ನಡೆದಿದೆ.
ಕಾಲೇಜು ಆಡಳಿತ ಮಂಡಳಿಯ ದಿಢೀರ್ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು, ಪರೀಕ್ಷೆ ಬಹಿಷ್ಕರಿಸಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಡಿಸಿ ಎಂ.ಜಿ. ಹಿರೇಮಠ ಅವರನ್ನು ವಿದ್ಯಾರ್ಥಿನಿಯರು ಭೇಟಿಯಾದರು. ಪದವಿ ಕಾಲೇಜುಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ. ಆದರೂ ತರಗತಿಗೆ ಅವಕಾಶ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ತಕ್ಷಣವೇ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಕಾಲೇಜು ಪ್ರಾಚಾರ್ಯರ ಜೊತೆಗೆ ಮಾತನಾಡಿ ತರಗತಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಸೂಚಿಸಿದರು. ನಂತರ ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿನಿಯರು, ತರಗತಿಗೆ ತೆರಳಿ ಪರೀಕ್ಷೆ ಬರೆದರು. ವಿದ್ಯಾರ್ಥಿನಿಯರಿಗೆ ಪಾಲಿಕೆಯ ಎಐಎಂಐಎಂ ಸದಸ್ಯ ಶಾಹಿದ್ ಪಠಾಣ್ ಸಾಥ್ ನೀಡಿದರು.
ಇದನ್ನೂ ಓದಿ: ಹಿಜಾಬ್ ವಿವಾದ: ಫೆ. 26ರ ವರೆಗೆ ವಿಜಯಪುರದಲ್ಲಿ ನಿಷೇಧಾಜ್ಞೆ ಮುಂದುವರಿಕೆ
ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು, ಹಿಜಾಬ್ ಧಾರಣೆ ನಮ್ಮ ಹಕ್ಕು. ನಾವು ಹಿಜಾಬ್ ಧರಿಸಿಯೇ ತರಗತಿಗೆ ಬರುತ್ತೇವೆ. ನಮ್ಮ ಸಂಪ್ರದಾಯ ಬಿಡುವುದಿಲ್ಲ. ಈಗಾಗಲೇ ಡಿಸಿ ಅವರು ಪ್ರಿನ್ಸಿಪಾಲ್ ಜೊತೆಗೆ ಮಾತನಾಡಿದ್ದಾರೆ. ತರಗತಿಗೆ ಅವಕಾಶ ನೀಡದಿದ್ದರೆ ಮರಳಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.