ಬೆಳಗಾವಿ: ಧ್ವನಿವರ್ಧಕ ವಿಚಾರವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸ್ವಾಗತಾರ್ಹ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಈ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಡವಾದರೂ ಅಧಿಸೂಚನೆ ಹೊರಡಿಸಿರುವ ಸರ್ಕಾರದ ಕ್ರಮ ಯೋಗ್ಯವಾಗಿದೆ. ಧ್ವನಿವರ್ಧಕ ಹಚ್ಚಲು ಅನುಮತಿ ಕಡ್ಡಾಯ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್, ಶಬ್ದಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಎಸಿಪಿ, ಡಿವೈಎಸ್ಪಿ ಮಟ್ಟದಲ್ಲಿ ಅನುಮತಿ ಪಡೆಯಬೇಕು ಎಂಬುದು ಸ್ವಾಗತಾರ್ಹ. ಅಧಿಸೂಚನೆ ಹೊರಬಿದ್ದಿರುವುದಕ್ಕೆ ಮುಖ್ಯಮಂತ್ರಿ, ಸರ್ಕಾರಕ್ಕೆ ಅಭಿನಂದಿಸುವೆ. ನಾಳೆಯಿಂದ ಸುಪ್ರಭಾತ ಹೋರಾಟವನ್ನು ವಾಪಸ್ ಪಡೆಯುತ್ತೇವೆ. ಅಧಿಸೂಚನೆ ಹೊರಬಿದ್ದ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ಹಿಂಪಡೆಯುತ್ತಿದ್ದೇವೆ. 15 ದಿನಗಳ ನಂತರ ಏನೆಲ್ಲ ಕ್ರಮಗಳಾಗುತ್ತವೆ ಎಂಬುದನ್ನು ನೋಡುತ್ತೇವೆ. ಮುಂದಿನ ಹೋರಾಟದ ಬಗ್ಗೆ ಬಳಿಕ ನಿರ್ಧಾರ ಪ್ರಕಟಿಸುತ್ತೇವೆ ಎಂದು ಮುತಾಲಿಕ್ ಹೇಳಿದರು.
ಧ್ವನಿವರ್ಧಕ ಬಳಸಲು ಮಾರ್ಗಸೂಚಿ ಮತ್ತು ಅನುಮತಿ ಇಲ್ಲದೇ ಅಳವಡಿಸದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಮಾರ್ಗಸೂಚಿ ಹೊರಡಿಸಿದ್ದಾರೆ.
(ಇದನ್ನೂ ಓದಿ: ಪರಸ್ಪರ ಒಪ್ಪಿ ಮಸೀದಿ-ದೇವಾಲಯಗಳ ಧ್ವನಿವರ್ಧಕ ತೆಗೆದ ಗ್ರಾಮಸ್ಥರು)