ಬೆಳಗಾವಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ ಯುವರಾಜ್ ಕದಂ ಅವರಿಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಗೆ ದಿಢೀರ್ ಔತಣಕೂಟ ಆಯೋಜಿಸುವ ಮೂಲಕ ತೀವ್ರ ಕುತೂಹಲ ಮೂಡುವಂತೆ ಮಾಡಿದ್ದಾರೆ.
ಯುವರಾಜ್ ಕದಂ ಅವರನ್ನು ಬೆಳಗಾವಿ ಎಪಿಎಂಸಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಾನೇ ಎಂದು ರಮೇಶ ಜಾರಕಿಹೊಳಿ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು. ಅಲ್ಲದೆ, ಈ ಮಧ್ಯೆ ಯುವರಾಜ್ ಕದಂ ಅವರು ರಮೇಶ್ ಜಾರಕಿಹೊಳಿ, ಕೇಂದ್ರ ಸಚಿವ ಸುರೇಶ ಅಂಗಡಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಸೇರಿ ಬಿಜೆಪಿ ಶಾಸಕರಿಗೆ ಔತಣಕೂಟ ಆಯೋಜಿಸಿ ಅಚ್ಚರಿ ಮೂಡಿಸಿದರು.
ಆಗ ರಮೇಶ ಜಾರಕಿಹೊಳಿ ಪಕ್ಕದಲ್ಲೇ ಕುಳಿತು ಕದಂ ಭೋಜನ ಮಾಡಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿತ್ತು. ಎಪಿಎಂಸಿ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಸಭಾ ಭವನದಲ್ಲಿ ಬಿಜೆಪಿ ನಾಯಕರಿಗೆ ಯುವರಾಜ್ ಕದಂ ಔತಣಕೂಟ ಆಯೋಜಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಗೆಲುವಿನಲ್ಲಿ ಕದಂ ಪ್ರಮುಖ ಪಾತ್ರ ವಹಿಸಿದ್ದರು.