ಬೆಳಗಾವಿ: ಮಾಜಿ ಪ್ರಧಾನಿ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ವರೆಗೂ ಎಲ್ಲ ಪ್ರಧಾನಿಗಳು ಭ್ರಷ್ಟಾಚಾರಿಗಳಾಗಿದ್ದರು. ಆದರೆ, ಆ ಪೈಕಿ ಲಾಲ್ ಬಹದ್ದೂರ್ ಶಾಸ್ತ್ರಿ ಮಾತ್ರ ಭ್ರಷ್ಟಾಚಾರಿ ಆಗಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆರೋಪಿಸಿದರು.
ನಗರದ ಮರಾಠ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿ ಆಶ್ರಯದಲ್ಲಿ ಹಮ್ಮಿಕೊಂಡ ಬೆಳಗಾವಿ ಗ್ರಾಮಾಂತರ ಹಾಗೂ ಮಹಾನಗರ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇವಲ ಮತದ ಹಿಂದೆ ಹೋಗಿದ್ದರಿಂದಲೇ ದೇಶದಲ್ಲಿ ಕಾಂಗ್ರೆಸ್ ಖಾಲಿ ಆಗಿದೆ. ವೈಚಾರಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ, ಕಾರ್ಯಾಧ್ಯಕ್ಷ ರಾಜೀನಾಮೆ ನೀಡಿ 6 ತಿಂಗಳು ಕಳೆಯಿತು. ಆದರೆ, ಆ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವ ತಾಕತ್ತು ಇಲ್ಲದ ಕಾಂಗ್ರೆಸ್ ದೇಶದಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ ಎಂದರು.
ಸಿದ್ದರಾಮಯ್ಯನವರು ಹೇಳಿದಂತೆ ನನಗೆ ರಾಜಕೀಯ ಜ್ಞಾನ ಇಲ್ಲ. ಅವರು ಹೇಳಿದ್ದು ಸತ್ಯ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ರಾಜಕೀಯ ಈಗ ಅಭ್ಯಾಸ ಮಾಡ್ತಿದ್ದೇನೆ. ರಾಜಕೀಯ ಅನುಭವಿ, ಜ್ಞಾನಿ, ರಾಜಕೀಯ ಪಂಡಿತ ಸಿದ್ದರಾಮಯ್ಯಗೆ ಡಿಕೆಶಿಯನ್ನು ಅಧ್ಯಕ್ಷ ಮಾಡಲು ಆಗಿಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಡಿಕೆಶಿಯನ್ನು ಮಾಡಲಿ ಅಂತಾ ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ದೇಶದಲ್ಲಿ ಬಿಜೆಪಿ ಇಂದು ಸುವರ್ಣ ಯುಗದಲ್ಲಿದೆ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರಗಳು ಉತ್ತಮ ಆಡಳಿತ ನಡೆಸುತ್ತಿವೆ. ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ, ರೈತರ ಸಾಲ ಮನ್ನಾ ಸೇರಿ ಹಲವು ಯೋಜನೆಗಳನ್ನು ನೀಡುವ ಮೂಲಕ ಬಡವರ ಕಣ್ಣೀರು ಒರೆಸುತ್ತಿದ್ದಾರೆ. ದೆಹಲಿಯಲ್ಲಿ ಇಷ್ಟು ದಿನ ಇಲ್ಲದ ಗಲಭೆ ಅಮೆರಿಕ ಅಧ್ಯಕ್ಷರು ಬಂದಾಗ ಏಕೆ ಆಯ್ತು. ದೇಶದಲ್ಲಿ ನಡೆಯುವ ಎಲ್ಲ ಗಲಭೆಗೆಗಳಿಗೂ ಕಾಂಗ್ರೆಸ್ ಕಾರಣ. ಮೋದಿ ಹೆಸರಿಗೆ ಕಳಂಕ ತರುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ಇನ್ನೂ ಮೂರು ವರ್ಷದಲ್ಲಿ ಅಯೋಧ್ಯೆಯ ಮಂದಿರ ಪೂರ್ಣ ಆಗಲಿದೆ ಎಂದರು.
ಇದೇ ವೇಳೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ಬೆಳಗಾವಿ ಜಿಲ್ಲೆಯಿಂದ ಯಾವ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆಯೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಬೆಂಗಳೂರಿನ ನಂತರ ಬೆಳಗಾವಿ ಜಿಲ್ಲೆ ರಾಜಕೀಯವಾಗಿ ಬಲಾಢ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಮೊದಲ ಬಾರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಅಭಿವೃದ್ಧಿಯ ಮೂಲಕ ಇದರ ಸದುಪಯೋಗ ಪಡೆದುಕೊಂಡು ಗ್ರಾಮ ಪಂಚಾಯತ್, ಜಿಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪಕ್ಷವನ್ನು ಸಂಘಟನೆ ಮಾಡೋಣ ಎಂದರು.