ಚಿಕ್ಕೋಡಿ: ಕಲರ್ಸ್ ಕನ್ನಡ ವಾಹಿನಯ ಬಿಗ್ಬಾಸ್ ಸೀಸನ್- 7 ಕಾರ್ಯಕ್ರಮಕ್ಕೆ ಅಥಣಿ ಮೂಲದ ಗುರುಲಿಂಗ ಸ್ವಾಮೀಜಿ ಆಯ್ಕೆಯಾಗಿರುವುದು ಭಕ್ತರಲ್ಲಿ ಸಂತಸವನ್ನುಂಟುಮಾಡಿದೆ.
ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಅಕ್ಕಿಮಠದ ಪೀಠಾಧಿಪತಿಯಾಗಿರುವ ಗುರುಲಿಂಗ ಸ್ವಾಮೀಜಿ ಮೂಲತಃ ಅಥಣಿಯವರಾಗಿದ್ದಾರೆ. ಚನ್ನಬಸವ ಸ್ವಾಮೀಜಿ ಗರಡಿಯಲ್ಲಿ ಪಳಗಿದ ಅವರು ಅಥಣಿ, ಚಿತ್ರದುರ್ಗ, ಬೆಂಗಳೂರು, ಮೈಸೂರಿನಲ್ಲಿ ಶಿಕ್ಷಣ ಪಡೆದಿದ್ದು, ಇವರ ತಂದೆ-ತಾಯಿ ಅಥಣಿಯಲ್ಲಿ ವಾಸಿಸುತ್ತಿದ್ದಾರೆ.
ವಾಗ್ಮಿ, ಸಾಮಾಜಿಕ ಚಿಂತಕರಾಗಿರುವ ಗುರುಲಿಂಗ ಸ್ವಾಮೀಜಿ, ಅಗಡಿ ಮಠದಲ್ಲಿ ಧರ್ಮ ಪ್ರಸಾರ ಮಾಡುತ್ತಾ ಧಾರ್ಮಿಕ, ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಎಂಎ ಪದವೀಧರರಾಗಿ ಹತ್ತು ಹಲವು ಸಮಾಜಮುಖಿ ಸೇವೆ ಮಾಡಿದ್ದಾರೆ. ಇವರು ಮಾಡಿದ ಸೇವೆ ಪರಿಗಣಿಸಿ ಪೀಸ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ.
ಬಿಗ್ಬಾಸ್ಗೆ ಹೋಗುವ ಉದ್ದೇಶದ ಕುರಿತು ತಿಳಿಸಿದ ಗುರುಲಿಂಗ ಸ್ವಾಮೀಜಿ, ಭಕ್ತರ ಒಪ್ಪಿಗೆ ಪಡೆದು ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ. ಸ್ಪರ್ಧೆಯಲ್ಲಿ ಗೆಲ್ಲುವ ಮೊತ್ತವನ್ನು ನೆರೆ ಸಂತ್ರಸ್ತರಿಗೆ ನೀಡುವುದಾಗಿ ತಿಳಿಸಿದ್ದಾರೆ.
ಶ್ರೀಗಳ ಪೂರ್ವಾಶ್ರಮ ತಂದೆಯವರಾದ ಸರ್ವ ಭೂಷಣ್ ಹಿರೇಮಠ್ ಮಾತನಾಡಿ, ಇದೊಂದು ಸುದೈವ. ಶಿವಯೋಗಿಗಳ ಕೃಪೆ ಅವರ ಮೇಲಿದೆ. ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರೀಗಳು ಶ್ರಮಿಸುತ್ತಿದ್ದಾರೆ. ಅವರು ನಮ್ಮ ಕುಟುಂಬದವರು ಎಂಬ ಹೆಮ್ಮೆಯಿದೆ. ಅಥಣಿ ತಾಲೂಕಿಗೆ ಗೌರವ ತರುವ ಕಾರ್ಯವನ್ನು ಶ್ರೀಗಳು ಮಾಡಲಿ. ಅವರ ಧರ್ಮ ಪ್ರಸಾರ ಕೂಡ ಬಿಗ್ಬಾಸ್ನಲ್ಲಿ ನಡೆಯಲಿ ಎಂದರು.