ಬೆಳಗಾವಿ: ಐಟಿಬಿಟಿ ಕ್ಯಾಂಪಿನಿಂದ ಇಂಡೋ ಟಿಬೆಟಿಯನ್ ಗಡಿ ಪೊಲೀಸರಿಗೆ ಸೇರಿದ ಎರಡು AK 47 ರೈಫಲ್ ಕಳವು ಆಗಿರುವ ಘಟನೆ ಬೆಳಗಾವಿ ತಾಲೂಕಿನ ಹಾಲಭಾವಿಯಲ್ಲಿ ನಡೆದಿದೆ. ಬಿಗಿ ಪೊಲೀಸ್ ಭದ್ರತೆ ನಡುವೆಯೂ ಎಕೆ-47 ರೈಫಲ್‌ಗಳು ಕಳ್ಳತನವಾಗಿರುವುದು ಆತಂಕ ಮೂಡಿಸಿದೆ.
ಇಂಡೋ ಟಿಬೆಟಿಯನ್ ಗಡಿ ಪೊಲೀಸರಾದ ರಾಜೇಶಕುಮಾರ, ಸಂದೀಪ ಮೀನಾ ಎಂಬುವವರಿಗೆ ಸೇರಿದ ಎರಡು ಎಕೆ - 47 ಕಳುವಾಗಿವೆ. ನಕ್ಸಲ್ ನಿಗ್ರಹ ತರಬೇತಿಗಾಗಿ ಮಧುರೈನ 45ನೇ ಬೆಟಾಲಿಯನ್ ಪೊಲೀಸ್ ಪಡೆಯು ಹಾಲಭಾವಿಗೆ ಆಗಮಿಸಿದೆ. ಈ ಕ್ಯಾಂಪಿನಿಂದಲೇ ಎಕೆ - 47 ರೈಫಲ್‌ಗಳ ಕಳ್ಳತನವಾಗಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಹೊರವಲಯದಲ್ಲಿ ಐಟಿಬಿಟಿ ಕ್ಯಾಂಪ್ನಲ್ಲಿ ಕಳೆದ ಆ.17ರ ರಾತ್ರಿ ರೈಫಲ್‌ಗಳು ಕಳ್ಳತನವಾಗಿವೆ. ವಿಷಯ ತಿಳಿದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡಸಿದ್ದಾರೆ. ಸುತ್ತಲೂ ಬಿಗಿ ಭದ್ರತೆ ಸರ್ಪಗಾವಲು ಇದ್ದರೂ ಒಳನುಗ್ಗಿ ಅತ್ಯಾಧುನಿಕ ಶಸ್ತ್ರಾಸ್ತ್ರ ಎಗರಿಸಿ ಪರಾರಿಯಾಗಿರುವುದು ಆತಂಕ ಮೂಡಿಸಿದೆ. ಸದ್ಯ ಬೆಳಗಾವಿ ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ನೇತೃತ್ವದಲ್ಲಿ ವಿಶೇಷ ತಂಡ ಶೋಧಕಾರ್ಯ ನಡೆಸುತ್ತಿದೆ. ಕಳೆದ 24ಗಂಟೆಗಳಿಂದಲೂ ನಿರಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಐಟಿಬಿಪಿಯಿಂದ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಶತ್ರುಗಳಿಂದ ಸೈನಿಕರ ರಕ್ಷಣೆ.. ಆರ್ಮಿ ಆಂಟಿ ಅಟ್ಯಾಕ್ ಸಿಸ್ಟಮ್ ಅಭಿವೃದ್ಧಿಗೊಳಿಸಿದ ಶ್ಯಾಮ್ ಚೌರಾಸಿಯಾ)