ಬೆಳಗಾವಿ : ಬೆಳಗಾವಿಯಲ್ಲಿ ದಿನೇದಿನೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದರೂ ಜನರು ಮಾತ್ರ ಎಚ್ಚೆತ್ತಿಲ್ಲ. ನಿನ್ನೆ ಮಕರ ಸಂಕ್ರಮಣ ಹಬ್ಬದ ಹಿನ್ನೆಲೆ ಎಮ್ಮೆ ಓಡಿಸುವ ಸ್ಪರ್ಧೆ ಏರ್ಪಡಿಸಿ, ಸಾವಿರಾರು ಜನರು ಒಟ್ಟಿಗೆ ಜಮಾಯಿಸಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ್ದಾರೆ. ದುರಂತ ಅಂದರೆ ಆಡಳಿತಾರೂಢ ಬಿಜೆಪಿ ಸರ್ಕಾರದ ಶಾಸಕರೇ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ.
ನಗರದ ಚವಾಟ್ ಏರಿಯಾದಲ್ಲಿ ಎಮ್ಮೆ ಓಡಿಸುವ ಸ್ಪರ್ಧೆ ವೇಳೆ ಸಾಮಾಜಿಕ ಅಂತರ ಮರೆತು, ಮಾಸ್ಕ್ ಧರಿಸದೇ ಸಾವಿರಾರು ಜನರು ಭಾಗಿಯಾಗಿದ್ದಾರೆ. ಬೆಳಗಾವಿಯಲ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ ಬಿಜೆಪಿ ಶಾಸಕ ಅನಿಲ್ ಬೆನಕೆ ಬೇಜವಾಬ್ದಾರಿ ಪ್ರದರ್ಶಿಸಿ, ಎಮ್ಮೆ ಓಟದ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ.
ಪ್ರತಿ ವರ್ಷ ಸಂಕ್ರಾಂತಿ ಹಬ್ಬದಂದು ಎಮ್ಮೆ ಓಡಿಸುವ ಸ್ಪರ್ಧೆ ಆಯೋಜನೆ ಮಾಡಲಾಗುತ್ತದೆ. ಈ ವರ್ಷವೂ ಯುವಕರ ಸಂಘಟನೆ, ಪಂಚ ಸಮಿತಿ, ಗವಳಿ ಸಮಾಜದ ವತಿಯಿಂದ ಎಮ್ಮೆ ಓಡಿಸುವ ಸ್ಪರ್ಧೆ ನಡೆದಿದೆ. ಜನರನ್ನು ಎಚ್ಚರಿಸಿ ತಿಳುವಳಿಕೆ ನೀಡಬೇಕಿದ್ದ ಆಡಳಿತ ಪಕ್ಷದ ಶಾಸಕ ಅನಿಲ್ ಬೆನಕೆ ನಿರ್ಲಕ್ಷ್ಯತೆವಹಿಸಿದ್ದಾರೆ.
ಈಚೆಗಷ್ಟೇ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಕೋವಿಡ್ ದಂಗಲ್ ನಡೆದಿದೆ. ಇದರಿಂದ ಎಚ್ಚೆತ್ತುಕೊಳ್ಳಬೇಕಾಗಿದ್ದ ಶಾಸಕರು ಭಾರಿ ಪ್ರಮಾಣದಲ್ಲಿ ಸೇರಿದ್ದ ಜನಸಮೂಹದ ಮಧ್ಯೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಜನರು ಕೂಡ ಕೋವಿಡ್ ಮಾರ್ಗಸೂಚಿ ಪಾಲಿಸದೇ ಸ್ಪರ್ಧೆ ನೋಡಲು ಮುಗಿಬಿದ್ದಿದ್ದರು.
ಇದನ್ನೂ ಓದಿ: ಅಥಣಿಯ ಖಾಸಗಿ ಕಾಲೇಜಿನ 63 ವಿದ್ಯಾರ್ಥಿಗಳಿಗೆ ಕೊರೊನಾ.. ಕಟ್ಟಡ ಸೀಲ್‌ಡೌನ್