ಗೋಕಾಕ್: ಗೋಕಾಕ್ನಲ್ಲಿ ಉಪ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸ್ಟಾರ್ ಪ್ರಚಾರಕರಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಹಾಗೂ ನಟಿ ತಾರಾ ನಗರಕ್ಕೆ ಆಗಮಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪರ ಪ್ರಚಾರಕ್ಕೆ ಆಗಮಿಸಿರುವ ತಾರಾ, ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ತಾಲೂಕಿನ ಕೊಳವಿ, ನಂಬಾಪುರ, ಖನಗಾಂವ ಗ್ರಾಮಗಳಿಗೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಿಂದ ಈಗ ಭಾರತ ಪ್ರಪಂಚದಲ್ಲಿ ನಂ.1 ದೇಶವಾಗಿದೆ. ಇನ್ನು ಕರ್ನಾಟಕವನ್ನು ನಂ.1 ಮಾಡಲು ಸಿಎಂ ಯಡಿಯೂರಪ್ಪ ಹೊರಟಿದ್ದಾರೆ. ಯಡಿಯೂರಪ್ಪ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಗಳನ್ನು ನೀವು ಆರಿಸಿ ತರಬೇಕು. ರಾಜ್ಯದಲ್ಲಿ ಸ್ಥಿರ ಸರ್ಕಾರ ತರಲು ನೀವು ಕಮಲಕ್ಕೆ ಮತ ನೀಡಿ. ಒಳ್ಳೆಯ ಕೆಲಸ ಮಾಡಿಕೊಂಡು ಬಂದಿರುವ ಮತ್ತು ಸೋಲಿಲ್ಲದ ಸರದಾರ ಎಂದು ಬಿರುದು ಪಡೆದಿರುವ ರಮೇಶ್ ಜಾರಕಿಹೊಳಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ರೋಡ್ ಶೋ:
ಇನ್ನು ಉಪ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರವಾಗಿ ನಗರದಲ್ಲಿ ಕೈ ಕಾರ್ಯಕರ್ತರು ಪ್ರಚಾರ ನಡೆಸಿದರು. ನಗರದ ಬಸವೇಶ್ವರ ವೃತ್ತದಲ್ಲಿ ನೂರಾರು ಜನ ಕಾರ್ಯಕರ್ತರು ಸೇರಿ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡಿ ಪ್ರಚಾರ ನಡೆಸಿದರು.
ಲಖನ್ ಜಾರಕಿಹೊಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಪಾದಯಾತ್ರೆ ಮತ್ತು ಕಾರ್ಯಕರ್ತರ ಸಭೆ ನಡೆಸುತ್ತಿದ್ದರೆ, ಸಹೋದರ ಸತೀಶ್ ಜಾರಕಿಹೊಳಿ ಕೂಡ ಹಗಲಿರುಳು ಕಾಂಗ್ರೆಸ್ ಪರ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ.