ಬೆಳಗಾವಿ: ಮನೆಯ ಹಿತ್ತಲಿನಲ್ಲಿ ವಿದ್ಯುತ್ ತಗುಲಿ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿದ್ದು, ಸೊಸೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಮಡ್ಡಿ ಗಲ್ಲಿಯಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಅಜ್ಜಿ ಶಾಂತವ್ವ ಬಸ್ತವಾಡೆ, ಮೊಮ್ಮಗ ಸಿದ್ದಾರ್ಥ ಬಸ್ತವಾಡೆ (24)ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊಸೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕೋಡಿ ಉಪ ವಿಭಾಗದಲ್ಲಿ ಶನಿವಾರ ತಡರಾತ್ರಿ ಭಾರಿ ಮಳೆ ಆಗಿತ್ತು. ಮನೆಯ ಹಿತ್ತಲಲ್ಲಿ ಬಟ್ಟೆ ಒಣ ಹಾಕಲು ಕಟ್ಟಲಾಗಿದ್ದ ತಂತಿಗೆ ವಿದ್ಯುತ್ ಕಂಬದ ತಂತಿ ತಗುಲಿದೆ. ಇಂದು ಬೆಳಗ್ಗೆ ಮನೆಯ ಹಿತ್ತಲಲ್ಲಿ ಬಟ್ಟೆಗಳನ್ನು ತೆಗೆದುಕೊಳ್ಳಲು ಹೋಗಿರುವ ಸಂದರ್ಭದಲ್ಲಿ ಅಜ್ಜಿಗೆ ಕರೆಂಟ್ ಶಾಕ್ ಹೊಡೆದಿದೆ. ಅದನ್ನು ನೋಡಿ ಬಿಡಿಸಲು ಹೋದ ಮೊಮ್ಮಗನಿಗೂ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರೂ ಸಾವನ್ನಪ್ಪಿದ್ದಾರೆ. ಅಜ್ಜಿಯ ಸೊಸೆಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್‌ಗೆ ಬೆದರಿಕೆ: ದುಷ್ಕರ್ಮಿಯ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ
ಘಟನಾ ಸ್ಥಳಕ್ಕೆ ಸಂಕೇಶ್ವರ ಪಿಎಸ್ಐ ಗಣಪತಿ ಕೊಂಗನೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.