ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ನಡತೆ ಬೆಳೆಸಲು ಹಿರಿಯರು ರಾಮಾಯಣದ ಕಥೆಗಳನ್ನು ಹೇಳುತ್ತಾರೆ. ಆದರ್ಶಪುರುಷ ಶ್ರೀರಾಮ ನಡೆದಿದ್ದು ಸನ್ಮಾರ್ಗದಲ್ಲಿ ಅದನ್ನೇ ನಾವು ಅನುಸರಿಸಬೇಕು ಎಂದು ಬೋಧಿಸುತ್ತಾರೆ. ಅದೇ ರಾಮಾಯಣವು ಹೂಡಿಕೆಯ ಪಾಠ ಮತ್ತು ಹಣಕಾಸು ಯೋಜನೆಯನ್ನು ಸಹ ಹೊಂದಿದೆ ಎಂದರೆ ನೀವು ನಂಬುತ್ತೀರಾ?.
1. ಯೋಚಿಸಿ ರಾಮಸೇತು ನಿರ್ಮಾಣ: ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ, ಅಲ್ಲಿಗೆ ಹೋಗಬಯಸಿದ ಶ್ರೀರಾಮ ಅನೇಕ ಮಾರ್ಗಗಳನ್ನು ಅನ್ವೇಷಿಸಿದ್ದ. ಅದರಲ್ಲಿ ಒಂದು, ತನ್ನಲ್ಲಿನ ಬ್ರಹ್ಮಾಸ್ತ್ರದ ಮೂಲಕ ಇಡೀ ಸಮುದ್ರವನ್ನೇ ನಿರ್ಜಲಗೊಳಿಸುವುದು. ಆದರೆ, ಶ್ರೀರಾಮ ಈ ದಾರಿಯನ್ನು ಅನುಸರಿಸದೇ ತಾಳ್ಮೆ, ಸಂಯಮದಿಂದ ಪ್ರಕೃತಿಗೆ ವಿರುದ್ಧವಾಗಿ ಹೋಗದೇ ರಾಮಸೇತುವನ್ನು ನಿರ್ಮಿಸಲು ನಿರ್ಧರಿಸಿದ. ಇದರ ಅರ್ಥ ಚಿಕ್ಕ ಚಿಕ್ಕ ಕೆಲಸಗಳನ್ನು ಮಾಡುತ್ತಲೇ ನಾವು ದೊಡ್ಡ ಗುರಿಯನ್ನು ತಲುಪಬಹುದು. ಸಣ್ಣದಾಗಿ ಮತ್ತು ದೀರ್ಘಕಾಲದವರೆಗೆ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಗಳಿಸಬಹುದು ಎಂಬುದಾಗಿದೆ.
2. ವೈವಿಧ್ಯ ಹೂಡಿಕೆ ಇರಲಿ: ರಾಮ ಮಹಾನ್ ಯೋಧನಾಗಿದ್ದರೂ ರಾವಣನಂಥ ಬಲಿಷ್ಠ ಎದುರಾಳಿಯನ್ನು ಎದುರಿಸಲು ದೊಡ್ಡ ಸೈನ್ಯವೇ ಬೇಕೆಂದು ಹನುಮಂತ, ಸುಗ್ರೀವರ ಸಹಾಯದಿಂದ ದೊಡ್ಡ ಸೇನೆ ಕಟ್ಟಿದ. ಅಲ್ಲದೇ, ರಾವಣನ ಸಹೋದರ ವಿಭೀಷಣನ ಸಹಾಯ ಪಡೆದು ರಾವಣನ ಕೊನೆಗಾಣಿಸಿದ. ಅದೇ ರೀತಿ ನಮ್ಮ ಹೂಡಿಕೆಯೂ ಕೂಡ ಬಲಿಷ್ಠ ಸೇನೆಯಂತಿರಬೇಕು. ಸುರಕ್ಷಿತ ಆರ್ಥಿಕ ಭವಿಷ್ಯಕ್ಕಾಗಿ ಉಳಿತಾಯವು ಕೇವಲ ಸ್ಥಿರ ಠೇವಣಿಗಳ ಮೇಲೆ ಅವಲಂಬಿತವಾಗಿರಬಾರದು. ಹೂಡಿಕೆಯನ್ನು ಚಿನ್ನ, ಇಕ್ವಿಟಿ, ಸಾಲದ ರೂಪದಲ್ಲಿ ಹೊಂದಿರಬೇಕು.
3. ಅಡ್ಡಾದಿಡ್ಡಿ ಹೂಡಿಕೆ ತರವಲ್ಲ: ಸೀತೆಯನ್ನು ಅಪಹರಿಸಲು ಬಯಸಿದ ರಾವಣ, ಆಕೆಯ ಗಮನವನ್ನು ಸೆಳೆಯಲು ಚಿನ್ನದ ಜಿಂಕೆಯನ್ನು ಕಳುಹಿಸುತ್ತಾನೆ. ಇದಕ್ಕಾಗಿ ರಾಮ, ಲಕ್ಷ್ಮಣರು ಬೆನ್ನಟ್ಟಿ ಹೋಗುತ್ತಾರೆ. ಲಕ್ಷ್ಮಣ ಹಾಕಿದ ಗೆರೆಯನ್ನು ಸೀತೆ ದಾಟಿ ಬಂದಾಗ ಮಾರುವೇಷದಲ್ಲಿದ್ದ ರಾವಣ ಅಪಹರಿಸುತ್ತಾನೆ.
ಈ ಘಟನೆಯ ಸಾರಾಂಶವೇನೆಂದರೆ, ಆಕರ್ಷಕವಾಗಿ ಕಾಣುವ ಎಲ್ಲವನ್ನೂ ನಾವು ಬೆನ್ನಟ್ಟಬಾರದು. ಸಾಕಷ್ಟು ಮಂದಿ ಯಾವುದೇ ಅರಿವಿಲ್ಲದೇ, ಭಾರಿ ಆದಾಯ ಗಳಿಸುವ ನಿರೀಕ್ಷೆಯಲ್ಲಿ ಯಾರೋ ನೀಡಿದ ಸಲಹೆಗಳಿಂದ ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ. ಕ್ರಿಪ್ಟೋಕರೆನ್ಸಿಗಳು ಮತ್ತು ಕವರ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ಬಂದರೆ ಲಾಭ ಇಲ್ಲವಾದರೆ ಭಾರಿ ನಷ್ಟ ತಂದೊಡ್ಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೂಡಿಕೆ ಮಾಡುವ ಮುನ್ನ ಲಕ್ಷ್ಮಣ ರೇಖೆಯಂತೆ ಒಂದು ವಿಧಾನವನ್ನು ಅಳವಡಿಸಿಕೊಂಡಿರಬೇಕು.
4. ಲಾಭ ಗಳಿಸುವುದು 'ಸಂಜೀವಿನಿ' ಹುಡುಕಿದಂತೆ: ರಾವಣನ ಮಗ ಮೇಘನಾಥನೊಂದಿಗೆ ಯುದ್ಧ ಮಾಡುವಾಗ ಲಕ್ಷ್ಮಣ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನನಾಗುತ್ತಾನೆ. ನಂತರ ಹನುಮಂತನು ಸಂಜೀವಿನಿ ಎಂಬ ಔಷಧೀಯ ಮೂಲಿಕೆಗಾಗಿ ಹಿಮಾಲಯದ ಗಂಧಮರ್ದನ ಎಂಬ ಪರ್ವತಕ್ಕೆ ಹೋಗುತ್ತಾನೆ. ಆದರೆ, ಅದನ್ನು ಅರಿಯದೆ ಏಕಾಏಕಿ ಇಡೀ ಬೆಟ್ಟವನ್ನೇ ಕಿತ್ತು ತರುತ್ತಾನೆ.
ಹೀಗೆಂದರೆ, ಭಾರಿ ಆದಾಯವನ್ನು ನೀಡಬಲ್ಲ ಮಲ್ಟಿಬ್ಯಾಗರ್ ಸ್ಟಾಕ್‌ಗಳನ್ನು ಕಂಡುಹಿಡಿಯುವುದು ಸಂಜೀವಿನಿಯನ್ನು ಹುಡುಕುವಷ್ಟೇ ಕಷ್ಟದ ಕೆಲಸ. ಆಗ ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದು ಎಲ್ಲೆಲ್ಲೋ ಹೂಡಿಕೆ ಮಾಡಿ ನಷ್ಟ ಅನುಭವಿಸುವುದನ್ನು ತಪ್ಪಿಸುತ್ತದೆ. ಇಂಡೆಕ್ಸ್ನಲ್ಲಿ ಹೂಡಿಕೆ ಮಾಡಿದರೆ ಷೇರುಗಳ ಪಾಲನ್ನು ನೀವು ಪಡೆಯುತ್ತೀರಿ. ಉದಾಹರಣೆಗೆ, ನಿಫ್ಟಿ 50 ಇಂಡೆಕ್ಸ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ಆ ಕಂಪನಿಯ ಪಾಲನ್ನು ಹೊಂದಿರುತ್ತೀರಿ.
5. ಅವಸರ, ಅಹಂಕಾರ ಒಳ್ಳೆಯದಲ್ಲ: ರಾವಣ ಮಹಾನ್ ವಿಜ್ಞಾನಿ, ಪ್ರತಿಭಾವಂತ. ಗ್ರಹಗಳ ಚಲನೆಯಲ್ಲೂ ಹಸ್ತಕ್ಷೇಪ ಮಾಡುವಷ್ಟು ಶಕ್ತಿವಂತ ಎಂದು ರಾಮಾಯಣದಲ್ಲಿದೆ. ಆದರೆ, ಅವನ ಪ್ರತಿಭೆಗಳೆಲ್ಲವೂ ಅಹಂಕಾರದಿಂದ ಕೂಡಿರುತ್ತವೆ. ಅದೇ ಅವನ ಅವನತಿಗೆ ಕಾರಣವಾಯಿತು. ಕಷ್ಟಪಟ್ಟು ದುಡಿದ ಹಣವನ್ನು ಶಿಸ್ತಿನಿಂದ, ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡಿದರೆ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ದೊಡ್ಡ ಪ್ರಮಾಣದ ಲಾಭವನ್ನು ಗಳಿಸಲು ಸಾಧ್ಯ. ಇದು ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇದು ವೈಯಕ್ತಿಕವಾಗಿಯಲ್ಲದೇ, ಆರ್ಥಿಕವಾಗಿ ದೊಡ್ಡ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ತಪ್ಪಾಗಿ ಹೂಡಿಕೆ ಮಾಡಿದ್ದೇವೆ ಎಂದು ಅರಿತಲ್ಲಿ ಅದನ್ನು ತಕ್ಷಣವೇ ವಾಪಸ್ ತೆಗೆದುಕೊಳ್ಳುವ ಧೈರ್ಯ ಮಾಡಬೇಕು.
ಇದನ್ನೂ ಓದಿ: ಲೋನ್ ಟು ವ್ಯಾಲ್ಯು ನಿಯಮಗಳ ಸಡಿಲಿಕೆ ವಿಸ್ತರಣೆ: ಗೃಹ ಸಾಲ ಇನ್ನೂ ಅಗ್ಗ