ಮುಂಬೈ: ಯಾವುದೇ ಕಾರಣಕ್ಕೂ 500 ರೂಪಾಯಿ ನೋಟುಗಳನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ಆ ಪ್ರಶ್ನೆಯೂ ಇಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಮಾತು ಮುಂದುವರೆಸಿದ ಅವರು 1,000 ರೂ ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆಯೂ ಆರ್‌ಬಿಐ ಮುಂದೆ ಯಾವುದೇ ಯೋಚನೆ ಇಲ್ಲ, ಹಾಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.
"1,000 ರೂಪಾಯಿ ನೋಟು ಪರಿಚಯಿಸುತ್ತದೆಯೇ, 500 ರೂಪಾಯಿ ಹಿಂತೆಗೆದುಕೊಳ್ಳುತ್ತದೆಯೇ? ಎಂಬ ನಿಮ್ಮ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ" ಎಂದ ದಾಸ್, ಈ ಮೇಲಿನ ಸ್ಪಷ್ಟನೆ ನೀಡಿದರು.
"ಅದರ ಬಗ್ಗೆ ಯಾವುದೇ ಚಿಂತನೆ ಇಲ್ಲ" ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದರು. ಮಾರುಕಟ್ಟೆಯಲ್ಲಿ ಯಾವುದೇ ಊಹಾಪೋಹಗಳು ವರದಿಯಾಗಬಾರದು ಎಂದೂ ಶಕ್ತಿಕಾಂತ್ ದಾಸ್ ಹೇಳಿದರು. ದಯವಿಟ್ಟು ಯಾವುದೇ ರೀತಿಯ ಊಹಾಪೋಹಗಳಿಗೆ ಆಸ್ಪದ ನೀಡಬೇಡಿ ಎಂದು ನಾನು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕೇಂದ್ರ ಬ್ಯಾಂಕ್ಗೆ 500 ರೂ ನೋಟುಗಳನ್ನು ವಾಪಸ್ ಪಡೆಯುವುದಾಗಲಿ, 1000 ರೂ ನೋಟುಗಳನ್ನು ಜಾರಿಗೆ ತರುವ ಯೋಚನೆ ಆಗಲಿ ಇಲ್ಲ ಎಂದು ಹೇಳಲು ಬಯಸುತ್ತೇನೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ಈ ಬಗ್ಗೆ ಯಾವುದೇ ಕಲ್ಪನೆಯೂ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ ಎಂದರು.
2000 ನೋಟುಗಳನ್ನ ಹಿಂಪಡೆದುಕೊಂಡಿದ್ದ ಆರ್‌ಬಿಐ: ಇತ್ತೀಚೆಗಷ್ಟೆ ಆರ್‌ಬಿಐ 2 ಸಾವಿರ ರೂಪಾಯಿ ನೋಟುಗಳನ್ನ ಚಲಾವಣೆಯಿಂದ ಹಿಂಪಡೆದುಕೊಂಡಿದೆ. ನೋಟುಗಳನ್ನು ಬ್ಯಾಂಕ್ಗಳಿಗೆ ಮರಳಿ ಹಣ ಪಡೆಯಲು ಸೆಪ್ಟೆಂಬರ್ 31 ರವರೆಗೂ ಕಾಲಾವಕಾಶ ನೀಡಿದೆ.
ಆರ್‌ಬಿಐ ನವೆಂಬರ್ 2016 ರರಲ್ಲಿ 2,000 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. 2016 ರ ನವೆಂಬರ್ 8ರಂದು ಪ್ರಧಾನಿ ಈ ಮೊದಲಿದ್ದ 500, 1000 ರೂ ನೋಟುಗಳನ್ನು ರದ್ದು ಮಾಡಿದ್ದರು. ಆ ವೇಳೆ ಆರ್‌ಬಿಐ ಕರೆನ್ಸಿ ಅಗತ್ಯತೆಯನ್ನು ತ್ವರಿತವಾಗಿ ಪೂರೈಸಲು 2,000 ರೂ ನೋಟುಗಳನ್ನು ಚಲಾವಣೆಗೆ ತಂದಿತ್ತು. ಮತ್ತು 2019 ರಿಂದ 2 ಸಾವಿರ ರೂಪಾಯಿ ನೋಟುಗಳ ಮುದ್ರಣವನ್ನು ಕೂಡಾ ನಿಲ್ಲಿಸಿತ್ತು.
ಬ್ಯಾಂಕ್ ಖಾತೆಗಳಲ್ಲಿ ವಿನಿಮಯ ಮತ್ತು ಠೇವಣಿ ಮಾಡಲು ಸಾಕಷ್ಟು ಸಮಯ ಲಭ್ಯ ಇರುವುದರಿಂದ ಜನರು ಭಯಪಡಬಾರದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದರು. ಆರ್‌ಬಿಐನಲ್ಲಿ ಮಾತ್ರವಲ್ಲದೇ ಬ್ಯಾಂಕ್‌ಗಳು ನಿರ್ವಹಿಸುವ ಕರೆನ್ಸಿ ಚೆಸ್ಟ್‌ಗಳಲ್ಲಿಯೂ ಸಾಕಷ್ಟು ಪ್ರಮಾಣದ ಮುದ್ರಿತ ನೋಟುಗಳು ಲಭ್ಯವಿವೆ ಎಂದು ಅವರು ತಿಳಿಸಿದ್ದರು.
ಇದನ್ನು ಓದಿ:ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಆರ್‌ಬಿಐ ನಿರ್ಧಾರ.. ಜಿಡಿಪಿ ನಮ್ಮ ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದ ದಾಸ್