ನವದೆಹಲಿ: ಗುಜರಾತ್ ನಲ್ಲಿ ಅತ್ಯಾಧುನಿಕ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಕಾರ್ಖಾನೆ ಆರಂಭಿಸುವುದಾಗಿ ಟಾಟಾ ಗ್ರೂಪ್ ಬುಧವಾರ ಪ್ರಕಟಿಸಿದೆ. ಜಾಗತಿಕ ಚಿಪ್ ಹಬ್ ಆಗುವ ಭಾರತದ ಪ್ರಯಾಣದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ. ಗಾಂಧಿನಗರದಲ್ಲಿ ನಡೆದ 10 ನೇ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್, ಟಾಟಾ ಗ್ರೂಪ್ ರಾಜ್ಯದ ಧೋಲೆರಾದಲ್ಲಿ ಬೃಹತ್ ಗಾತ್ರದ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್ ಘಟಕ ಸ್ಥಾಪನೆಯನ್ನು ಅಂತಿಮಗೊಳಿಸುವ ಮತ್ತು ಘೋಷಿಸುವ ಹಂತದಲ್ಲಿದೆ ಎಂದು ಹೇಳಿದರು.
"ನಾವು ಸೆಮಿಕಂಡಕ್ಟರ್ ಘಟಕದ ಮಾತುಕತೆಗಳನ್ನು ಪೂರ್ಣಗೊಳಿಸಲಿದ್ದೇವೆ ಮತ್ತು 2024 ರಲ್ಲಿ ಘಟಕವನ್ನು ಪ್ರಾರಂಭಿಸಲಿದ್ದೇವೆ" ಎಂದು ಅವರು ಸಭೆಗೆ ತಿಳಿಸಿದರು.
ಕಂಪನಿಯು ಮುಂದಿನ ಕೆಲ ತಿಂಗಳುಗಳಲ್ಲಿ ಗುಜರಾತ್ನಲ್ಲಿ 20 ಗಿಗಾವ್ಯಾಟ್ ಬ್ಯಾಟರಿ ಶೇಖರಣಾ ಕಾರ್ಖಾನೆಯನ್ನು ಕೂಡ ಪ್ರಾರಂಭಿಸುವ ಸಾಧ್ಯತೆಯಿದೆ. "ಈ ಮಹತ್ವಾಕಾಂಕ್ಷೆಯ ಯೋಜನೆಯು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ತನ್ನ ಉಪಸ್ಥಿತಿ ಹೆಚ್ಚಿಸಲು ಮತ್ತು ಸುಸ್ಥಿರ ವಿದ್ಯುತ್ ಪರಿಹಾರಗಳ ಬಗ್ಗೆ ಕೊಡುಗೆ ನೀಡಲು ಟಾಟಾದ ಕಾರ್ಯತಂತ್ರದ ಕ್ರಮವನ್ನು ಸೂಚಿಸುತ್ತದೆ" ಎಂದು ಚಂದ್ರಶೇಖರನ್ ಹೇಳಿದರು.
ಟಾಟಾ ಗ್ರೂಪ್ ತಮಿಳುನಾಡಿನ ಹೊಸೂರಿನಲ್ಲಿ ಭಾರತದ ಅತಿದೊಡ್ಡ ಐಫೋನ್ ಜೋಡಣೆ ಘಟಕ ನಿರ್ಮಿಸಲು ಯೋಜಿಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಸೌಲಭ್ಯವು ಸುಮಾರು 20 ಅಸೆಂಬ್ಲಿ ಲೈನ್ ಗಳನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಎರಡು ವರ್ಷಗಳಲ್ಲಿ 50,000 ಕಾರ್ಮಿಕರನ್ನು ನೇಮಿಸಿಕೊಳ್ಳಲಿದೆ. ಈ ಕಾರ್ಖಾನೆ 12 ರಿಂದ 18 ತಿಂಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸುವ ನಿರೀಕ್ಷೆಯಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಯುಎಸ್ ಮೂಲದ ಮೈಕ್ರಾನ್ ಟೆಕ್ನಾಲಜಿ ಗುಜರಾತ್ನ ಸನಂದ್ನಲ್ಲಿ 22,500 ಕೋಟಿ ರೂ. ವೆಚ್ಚದ ಸೆಮಿಕಂಡಕ್ಟರ್ ತಯಾರಿಕಾ ಘಟಕದ ನಿರ್ಮಾಣವನ್ನು ಆರಂಭಿಸಿದೆ. ಎಂಜಿನಿಯರಿಂಗ್ ದಿಗ್ಗಜ ಲಾರ್ಸನ್ ಅಂಡ್ ಟೂಬ್ರೊ (ಎಲ್ & ಟಿ) ಕೂಡ ಸೆಮಿಕಂಡಕ್ಟರ್ ಚಿಪ್ ವಿನ್ಯಾಸ ಅಂಗಸಂಸ್ಥೆಯನ್ನು ನಿರ್ಮಿಸಲು 830 ಕೋಟಿ ರೂ.ಗಳವರೆಗೆ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಇದು ಸೆಮಿಕಂಡಕ್ಟರ್ ಹಬ್ ಆಗುವ ದೇಶದ ಗುರಿಗೆ ಮತ್ತಷ್ಟು ಉತ್ತೇಜನ ನೀಡಿದೆ.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಇತರ ವಿಶ್ವ ನಾಯಕರ ಉಪಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗುಜರಾತ್ನ ಗಾಂಧಿನಗರದಲ್ಲಿ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ 2024 ಅನ್ನು ಉದ್ಘಾಟಿಸಿದರು.
ಇದನ್ನೂ ಓದಿ : ಆಪ್ ಸ್ಟೋರ್ನಿಂದ ಬಿನಾನ್ಸ್, ಕುಕಾಯಿನ್ ಕ್ರಿಪ್ಟೊ ತೆಗೆದುಹಾಕಿದ ಆ್ಯಪಲ್