ಮುಂಬೈ (ಮಹಾರಾಷ್ಟ್ರ): ಮುಂಬೈ ಷೇರುಪೇಟೆಯಲ್ಲಿ ಈಗ ಕರಡಿಯದ್ದೇ ಸಾಮ್ರಾಜ್ಯ,ಕಳೆದ ಒಂದುವಾರದಿಂದ ಷೇರುಪೇಟೆ ಕೆಂಪು ಮಾರ್ಕ್ನಲ್ಲೇ ವ್ಯವಹಾರ ನಡೆಸುತ್ತಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ರೂಗಳನ್ನು ಕಳೆದುಕೊಂಡಿದ್ದಾರೆ. ಇಸ್ರೇಲ್ - ಹಮಾಸ್ ಯುದ್ಧ. ಅಮೆರಿಕ ಫೆಡರಲ್ ಬ್ಯಾಂಕ್ ಆರ್ಥಿಕ ನೀತಿ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆಯಲ್ಲೂ ಹಿಂಜರಿಕೆ ಕಂಡು ಬರುತ್ತಿದೆ.
ಕಳೆದ ಕೆಲವು ತಿಂಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಭಾರತೀಯ ಷೇರುಪೇಟೆಯಲ್ಲಿ ಕಳೆದೊಂದು ವಾರದಿಂದ ಬೇರ್ ಆಟ ಶುರುವಾಗಿದೆ. ನಿಫ್ಟಿ ಹಲವು ದಿನಗಳ ಬಳಿಕ 19 ಸಾವಿರಕ್ಕಿಂತ ಕೆಳಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ. ಇನ್ನು 66 ಸಾವಿರದಿಂದ 67 ರ ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದ್ದ ಸೆನ್ಸೆಕ್ಸ್ 63500ರ ಆಸು ಪಾಸಿಗೆ ಕುಸಿತ ಕಂಡಿದೆ. ಕಳೆದೊಂದು ವಾರದಲ್ಲಿ ಸೆನ್ಸೆಕ್ಸ್ ಬರೋಬ್ಬರಿ ಮೂರು ಸಾವಿರ ಅಂಕಗಳನ್ನು ಕಳೆದುಕೊಂಡಿದೆ.
ಈ ವಾರದ ಆರಂಭದಿಂದಲೂ ತೀವ್ರ ಕುಸಿತ ಕಾಣುತ್ತಿರುವ ಸೆನ್ಸೆಕ್ಸ್ 481.30 ಪಾಯಿಂಟ್‌ಗಳ ಗಮನಾರ್ಹ ಕುಸಿತ ದಾಖಲಿಸಿದೆ. ಇಂದು ಬೆಳಗ್ಗೆ 63564.74 ನಲ್ಲಿ ಮುಂಬೈ ಷೇರುಪೇಟೆ ಪ್ರಾರಂಭವಾಯಿತು. ಇನ್ನು ನಿಫ್ಟಿ 156.45 ಅಂಕಗಳ ನಷ್ಟದೊಂದಿಗೆ ಅಂದರೆ 18964.75 ನಲ್ಲಿ ವ್ಯವಹಾರ ಆರಂಭಿಸಿತು. ನಿಫ್ಟಿ ಕಂಪನಿಗಳ ಪೈಕಿ ನಾಲ್ಕು ಕಂಪನಿಗಳ ಷೇರುಗಳಷ್ಟೇ ಏರಿಕೆ ಕಂಡರೆ, ಪ್ರಮುಖ 46 ಕಂಪನಿಗಳ ಷೇರುಗಳು ಕುಸಿತ ಕಂಡವು.
ಕುಸಿತದ ನಡುವೆ ಕೆಲ ಆಶಾಕಿರಣ: ಆಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜಿ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಆರಂಭಿಕ ಏರಿಕೆ ದಾಖಲಿಸಿದವು. ಇದು ಹೂಡಿಕೆದಾರರಿಗೆ ಕತ್ತಲೆಯ ನಡುವೆ ಭರವಸೆಯ ಬೆಳಕನ್ನು ನೀಡಿತು. ಮತ್ತೊಂದು ಕಡೆ ಟೆಕ್ ಮಹೀಂದ್ರಾ, ಹಿಂಡಾಲ್ಕೊ, M&M, ಅದಾನಿ ಎಂಟರ್‌ಪ್ರೈಸಸ್ ಮತ್ತು ಬಜಾಜ್ ಫಿನ್‌ಸರ್ವ್‌ನಂತಹ ಕಂಪನಿಗಳು ಗಮನಾರ್ಹ ನಷ್ಟ ಅನುಭವಿಸಿವೆ.
ಹಲವಾರು ಜಾಗತಿಕ ಅಂಶಗಳು ಮಾರುಕಟ್ಟೆಯ ಆತಂಕಕ್ಕೆ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಸ್ರೇಲ್-ಹಮಾಸ್ ಸಂಘರ್ಷದ ಉಲ್ಬಣ, ಬಾಂಡ್ ಮಾರುಕಟ್ಟೆಯ ಚಂಚಲತೆ ಮತ್ತು ನಿಧಾನಗತಿಯ ಜಾಗತಿಕ ಆರ್ಥಿಕತೆಯಿಂದಾಗಿ ಈ ಹಿಂಜರಿಕೆ ಕಂಡು ಬಂದಿದೆ ಷೇರುಪೇಟೆ ಮೂಲಗಳು ತಿಳಿಸಿವೆ.
ಭಯಬೇಡ ಕೆಲ ಸಮಯ ಕಾಯಿರಿ: "ಭಾರತದ ಆರ್ಥಿಕತೆ ಸಕಾರಾತ್ಮಕವಾಗಿದ್ದು, ಯುದ್ಧದ ಕಾರಣದಿಂದಾಗಿ ಈ ತಾತ್ಕಾಲಿಕ ಹಿನ್ನಡೆ ಆಗಿದ್ದು, ಇದು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೂಡಿಕೆ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೂಡಿಕೆದಾರರು ದೊಡ್ಡ, ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಗಳಲ್ಲಿ ಎಚ್ಚರಿಕೆಯಿಂದ ಹೂಡಿಕೆ ಮಾಡಿ ಲಾಭ ಗಳಿಸುವತ್ತ ಚಿತ್ತ ಹರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. (ANI)
ಇದನ್ನು ಓದಿ: ಷೇರು ಮಾರುಕಟ್ಟೆಯಲ್ಲಿಂದು ಮಾರಾಟ ಭರಾಟೆ: ಸೆನ್ಸೆಕ್ಸ್ 522 & ನಿಫ್ಟಿ 160 ಅಂಕ ಕುಸಿತ