ಮುಂಬೈ : ಫೆಡರಲ್ ರಿಸರ್ವ್ ಬಡ್ಡಿದರ ಪರಿಷ್ಕರಣೆಯ ವರದಿ ಬಿಡುಗಡೆಗೆ ಮುಂಚಿತವಾಗಿ ಯುಎಸ್ ಬಡ್ಡಿದರ ಕಡಿತದ ಬಗ್ಗೆ ಆಶಾವಾದ ಮಸುಕಾಗುತ್ತಿರುವ ಮಧ್ಯೆ ಭಾರತದ ಬೆಂಚ್ ಮಾರ್ಕ್ ಸೂಚ್ಯಂಕಗಳು ಬುಧವಾರ ಸತತ ಎರಡನೇ ದಿನ ಕುಸಿತದೊಂದಿಗೆ ವಹಿವಾಟು ಕೊನೆಗೊಳಿಸಿದವು. ಬುಧವಾರದಂದು ಸೆನ್ಸೆಕ್ಸ್ 535.88 ಪಾಯಿಂಟ್ ಕುಸಿದು 71,356.60 ಕ್ಕೆ ತಲುಪಿದ್ದರೆ, ನಿಫ್ಟಿ 139.60 ಕುಸಿದು 21,526.20 ಕ್ಕೆ ತಲುಪಿದೆ.
ನಿಫ್ಟಿಯಲ್ಲಿ ಬಜಾಜ್ ಆಟೋ, ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಸಿಪ್ಲಾ ಮತ್ತು ಐಟಿಸಿ ಹೆಚ್ಚು ಲಾಭ ಗಳಿಸಿದರೆ, ಜೆಎಸ್ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ, ಟಾಟಾ ಸ್ಟೀಲ್, ಎಲ್ಟಿಐ ಮತ್ತು ಟೆಕ್ ಮಹೀಂದ್ರಾ ನಷ್ಟಕ್ಕೀಡಾದವು. ಬಜಾಜ್ ಆಟೋ ತನ್ನ ಷೇರು ಮರು ಖರೀದಿ ಯೋಜನೆಯ ನಂತರ ಶೇಕಡಾ 4.5 ಕ್ಕಿಂತ ಹೆಚ್ಚಾಗಿದೆ.
ಎರಡನೇ ಅತಿದೊಡ್ಡ ವಲಯ ಸೂಚ್ಯಂಕವಾದ ಐಟಿ ಶೇಕಡಾ 2.52 ರಷ್ಟು ಕುಸಿದಿದೆ. ಇದು ಜುಲೈ 21, 2023 ರ ನಂತರದ ಅತಿದೊಡ್ಡ ಇಂಟ್ರಾಡೇ ಶೇಕಡಾವಾರು ಕುಸಿತವಾಗಿದೆ. ಲೋಹದ ಷೇರುಗಳು ಗಮನಾರ್ಹ ನಷ್ಟ ಕಂಡರೆ, ಬ್ಯಾಂಕುಗಳು ಮತ್ತು ಆಟೋ ಷೇರುಗಳು ಸಹ ಇಳಿಕೆಯಲ್ಲಿ ಕೊನೆಗೊಂಡವು. ಇಂಧನ, ಫಾರ್ಮಾ ಮತ್ತು ಪಿಎಸ್ ಯು ಬ್ಯಾಂಕುಗಳು ಏರಿಕೆ ಕಂಡವು.
ಕಚ್ಚಾ ತೈಲ ಬೆಲೆಗಳು ಮತ್ತು ವಿದೇಶಿ ನಿಧಿಯ ಒಳಹರಿವಿನ ಬೆಂಬಲದೊಂದಿಗೆ ರೂಪಾಯಿ ಬುಧವಾರ ಯುಎಸ್ ಡಾಲರ್ ವಿರುದ್ಧ 4 ಪೈಸೆ ಏರಿಕೆಯಾಗಿ 83.28 ಕ್ಕೆ (ತಾತ್ಕಾಲಿಕ) ತಲುಪಿದೆ. ಆದಾಗ್ಯೂ, ದೇಶೀಯ ಷೇರುಗಳಲ್ಲಿ ನಕಾರಾತ್ಮಕ ಪ್ರವೃತ್ತಿಯ ಮಧ್ಯೆ ಭಾರತೀಯ ಕರೆನ್ಸಿ ಒತ್ತಡದಲ್ಲಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಸ್ಥಳೀಯ ರೂಪಾಯಿ ಡಾಲರ್ ವಿರುದ್ಧ 83.30 ಕ್ಕೆ ಪ್ರಾರಂಭವಾಯಿತು.
ಡಾಲರ್ ಎದುರು ರೂಪಾಯಿ ಕನಿಷ್ಠ 83.33 ಮತ್ತು ಗರಿಷ್ಠ 83.25 ರ ನಡುವೆ ಏರಿಳಿತಗೊಂಡು ಅಂತಿಮವಾಗಿ ಡಾಲರ್ ವಿರುದ್ಧ 83.28 (ತಾತ್ಕಾಲಿಕ) ಕ್ಕೆ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಹೆಚ್ಚಾಗಿದೆ.
ಕೆಂಪು ಸಮುದ್ರದಲ್ಲಿನ ಉದ್ವಿಗ್ನತೆಯು ಪೂರೈಕೆಯ ಮೇಲೆ ಪರಿಣಾಮ ಬೀರುವ ಬಗ್ಗೆ ಆತಂಕ ಮುಂದುವರಿದ ಕಾರಣದಿಂದ ಕಚ್ಚಾ ತೈಲ ಬೆಲೆಗಳು ಬುಧವಾರ ಏರಿಕೆ ಕಂಡವು. ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 18 ಸೆಂಟ್ಸ್ ಏರಿಕೆಯಾಗಿ 76.07 ಡಾಲರ್ಗೆ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್ಗೆ 2 ಸೆಂಟ್ಸ್ ಏರಿಕೆಯಾಗಿ 70.4 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : 2023ರಲ್ಲಿ 100 ಬಿಲಿಯನ್ ದಾಟಿದ ಯುಪಿಐ ವಹಿವಾಟುಗಳ ಸಂಖ್ಯೆ