ಮುಂಬೈ : ಚಿಲ್ಲರೆ ಹಣದುಬ್ಬರ ದತ್ತಾಂಶ ಪ್ರಕಟವಾಗುವ ಮುನ್ನ ಇಂಧನ ಷೇರುಗಳ ಮೌಲ್ಯ ಕುಸಿತದಿಂದಾಗಿ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರ ಕೆಳಮಟ್ಟದಲ್ಲಿ ಕೊನೆಗೊಂಡವು. ಇಂದು ಬಿಎಸ್ಇ ಸೆನ್ಸೆಕ್ಸ್ 377.50 ಪಾಯಿಂಟ್ಸ್ ಕುಸಿದು 69,551.03 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ-50 90 ಪಾಯಿಂಟ್ಸ್ ಕುಸಿದು 20,900 ಕ್ಕೆ ತಲುಪಿದೆ. ಹೆಚ್ಚಿನ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಇಳಿಕೆಯೊಂದಿಗೆ ಕೊನೆಗೊಂಡವು.
ಇದಕ್ಕೂ ಮುನ್ನ ವಹಿವಾಟಿನ ಮೊದಲ ಗಂಟೆಯಲ್ಲಿ ನಿಫ್ಟಿ ಹೊಸ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದರೆ, ಸೆನ್ಸೆಕ್ಸ್ ಸತತ ಎರಡನೇ ಅವಧಿಗೆ 70,000 ಗಡಿ ದಾಟಿತ್ತು. ಬ್ಯಾಂಕ್, ಇಂಧನ ಮತ್ತು ಆಟೋ ಷೇರುಗಳ ನಷ್ಟದೊಂದಿಗೆ ನಿಫ್ಟಿ ವಲಯ ಸೂಚ್ಯಂಕಗಳು ಇಳಿಕೆ ಕಂಡವು. ಎಚ್ಡಿಎಫ್ಸಿ ಲೈಫ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್-ಆಟೋ, ಎಸ್ಬಿಐ ಲೈಫ್ ಮತ್ತು ಆಕ್ಸಿಸ್ ಬ್ಯಾಂಕ್ ನಿಫ್ಟಿ-50 ರಲ್ಲಿ ಅಗ್ರ 5 ಲಾಭ ಗಳಿಸಿದ ಷೇರುಗಳಾಗಿವೆ. ಮತ್ತೊಂದೆಡೆ ಅಪೊಲೊ ಆಸ್ಪತ್ರೆ, ಸನ್ ಫಾರ್ಮಾ, ಮಾರುತಿ, ಕೋಲ್ ಇಂಡಿಯಾ ಮತ್ತು ಐಷರ್ ಮೋಟಾರ್ಸ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.
ಇತರ ವೈಯಕ್ತಿಕ ಷೇರುಗಳಲ್ಲಿ ಸ್ಪೈಸ್ ಜೆಟ್ ಷೇರುಗಳು ಮಂಗಳವಾರ ಎರಡನೇ ತ್ರೈಮಾಸಿಕದಲ್ಲಿ ನಷ್ಟ ವರದಿ ಮಾಡಿದ ನಂತರ ಶೇಕಡಾ 4 ಕ್ಕಿಂತ ಹೆಚ್ಚು ಕುಸಿದವು. ಏತನ್ಮಧ್ಯೆ, ಅಲ್ಟ್ರಾಟೆಕ್ ಸಿಮೆಂಟ್ ಶೇಕಡಾ 2.11 ರಷ್ಟು ಏರಿಕೆಯಾಗಿದ್ದು, ನಿಫ್ಟಿ 50 ರಲ್ಲಿ ಅಗ್ರ ಲಾಭ ಗಳಿಸಿದ ಷೇರುಗಳಲ್ಲಿ ಒಂದಾಗಿದೆ.
ರೂಪಾಯಿ ಅಲ್ಪ ಕುಸಿತ: ಭಾರತೀಯ ರೂಪಾಯಿ ಮಂಗಳವಾರ ಯುಎಸ್ ಡಾಲರ್ ವಿರುದ್ಧ 1 ಪೈಸೆ ಕುಸಿದು 83.38 ಕ್ಕೆ (ತಾತ್ಕಾಲಿಕ) ಸ್ಥಿರವಾಯಿತು. ದೇಶೀಯ ಇಕ್ವಿಟಿ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡವು ಮಾರುಕಟ್ಟೆಯ ಭಾವನೆಗಳನ್ನು ದುರ್ಬಲಗೊಳಿಸಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 83.36 ರಲ್ಲಿ ಪ್ರಾರಂಭವಾಯಿತು ಮತ್ತು ಡಾಲರ್ ವಿರುದ್ಧ 83.38 (ತಾತ್ಕಾಲಿಕ) ನಲ್ಲಿ ಸ್ಥಿರವಾಯಿತು. ಅಲ್ಲಿಗೆ ರೂಪಾಯಿ ಹಿಂದಿನ ಮುಕ್ತಾಯಕ್ಕಿಂತ 1 ಪೈಸೆ ನಷ್ಟ ದಾಖಲಿಸಿದೆ. ದಿನದ ವಹಿವಾಟಿನಲ್ಲಿ ರೂಪಾಯಿ 83.35 ರ ಗರಿಷ್ಠ ಮಟ್ಟ ಮುಟ್ಟಿತ್ತು ಮತ್ತು 83.39 ರ ಕನಿಷ್ಠ ಮಟ್ಟ ತಲುಪಿತ್ತು. ಸೋಮವಾರ ಭಾರತೀಯ ರೂಪಾಯಿ ಅಮೆರಿಕದ ಡಾಲರ್ ವಿರುದ್ಧ 83.37 ಕ್ಕೆ ಸ್ಥಿರವಾಗಿತ್ತು.
ಇದನ್ನೂ ಓದಿ : ತೆಲಂಗಾಣದಲ್ಲಿ ಸ್ಥಾಪನೆಯಾಗಬೇಕಿದ್ದ ಗೊರಿಲ್ಲಾ ಗ್ಲಾಸ್ ಕಾರ್ಖಾನೆ ತಮಿಳುನಾಡಿಗೆ ಶಿಫ್ಟ್