ಮುಂಬೈ : ಜಾಗತಿಕ ಮಾರುಕಟ್ಟೆಗಳು ಏರಿಳಿತ ಕಾಣುತ್ತಿದ್ದರೂ ಭಾರತದ ಪ್ರಮುಖ ಬೆಂಚ್ ಮಾರ್ಕ್ ಸೂಚ್ಯಂಕಗಳು ಸೋಮವಾರ ಸಕಾರಾತ್ಮಕ ಭಾವನೆಯಿಂದ ವಹಿವಾಟು ನಡೆಸಿದವು. ಐಟಿ, ಹಣಕಾಸು ಮತ್ತು ವಿದ್ಯುತ್ ಮತ್ತು ಅದಾನಿ ಗ್ರೂಪ್ ಷೇರುಗಳಲ್ಲಿ ಖರೀದಿ ಕಂಡುಬಂದರೆ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇವತ್ತೇ ಮಾರುಕಟ್ಟೆಗೆ ಬಂದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಕುಸಿದವು.
ಬಿಎಸ್ಇ ಸೆನ್ಸೆಕ್ಸ್ ದಿನದ ತನ್ನ ಕನಿಷ್ಠ ಮಟ್ಟವಾದ 64,853 ರಿಂದ 485 ಪಾಯಿಂಟ್ಗಳಷ್ಟು ಏರಿಕೆಯಾಗಿದೆ. ಬಿಎಸ್ಇ ಬೆಂಚ್ ಮಾರ್ಕ್ ಸೂಚ್ಯಂಕವು ಅಂತಿಮವಾಗಿ 267 ಪಾಯಿಂಟ್ಸ್ ಏರಿಕೆಗೊಂಡು 65,216 ಕ್ಕೆ ಕೊನೆಗೊಂಡಿತು. ಎನ್ಎಸ್ಇ ನಿಫ್ಟಿ-50 ಸೋಮವಾರ 83 ಪಾಯಿಂಟ್ಗಳ ಏರಿಕೆಯೊಂದಿಗೆ 19,426 ಕ್ಕೆ ತಲುಪಿ 19,394 ರಲ್ಲಿ ಸ್ಥಿರವಾಯಿತು.
261.85 ರೂ.ಗಳ ವಿಶೇಷ ಡಿಸ್ಕವರಿ ಬೆಲೆಯ ಬದಲಾಗಿ 265 ರೂ.ಗೆ ಲಿಸ್ಟ್ ಆದ ನಂತರ ಹೊಸ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಷೇರುಗಳು ಶೇಕಡಾ 5 ರಷ್ಟು ಲೋವರ್ ಸರ್ಕ್ಯೂಟ್ನಲ್ಲಿ 251 ರೂ.ಗೆ ಲಾಕ್ ಆಗಿದ್ದರೂ ಅಪಾರ ಪ್ರಮಾಣದ ವಹಿವಾಟು ಕಂಡವು. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಸುಮಾರು 78 ಮಿಲಿಯನ್ ಷೇರುಗಳ ವಹಿವಾಟು ನಡೆಯಿತು.
ಸೆನ್ಸೆಕ್ಸ್-30 ಷೇರುಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 1.5 ರಷ್ಟು ಕುಸಿದಿದೆ. ಮಹೀಂದ್ರಾ & ಮಹೀಂದ್ರಾ ಸುಮಾರು ಒಂದು ಪ್ರತಿಶತದಷ್ಟು ಕುಸಿದಿದೆ. ಬಜಾಜ್ ಫೈನಾನ್ಸ್ ಶೇಕಡಾ 2.7 ರಷ್ಟು ಏರಿಕೆಯಾಗಿದೆ. ಪವರ್ ಗ್ರಿಡ್ ಕಾರ್ಪೊರೇಷನ್, ಇಂಡಸ್ಇಂಡ್ ಬ್ಯಾಂಕ್, ಭಾರ್ತಿ ಏರ್ಟೆಲ್, ಎನ್ಟಿಪಿಸಿ, ಐಟಿಸಿ, ಬಜಾಜ್ ಫಿನ್ಸರ್ವ್, ಇನ್ಫೋಸಿಸ್, ನೆಸ್ಲೆ, ಟಿಸಿಎಸ್, ಟಾಟಾ ಸ್ಟೀಲ್, ಟೈಟನ್, ಆಕ್ಸಿಸ್ ಬ್ಯಾಂಕ್ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ತಲಾ 1-2 ಪ್ರತಿಶತ ಏರಿಕೆ ಕಂಡಿವೆ.
ಅದಾನಿ ಗ್ರೂಪ್ ಷೇರುಗಳಲ್ಲಿ ಅದಾನಿ ಪವರ್ ಮತ್ತು ಅದಾನಿ ಟ್ರಾನ್ಸಮಿಶನ್ ತಲಾ ಶೇಕಡಾ 6 ಕ್ಕಿಂತ ಹೆಚ್ಚಾಗಿದೆ. ಅದಾನಿ ಎಂಟರ್ ಪ್ರೈಸಸ್, ಅದಾನಿ ಪೋರ್ಟ್ಸ್, ಅದಾನಿ ಗ್ರೀನ್, ಎಸಿಸಿ ಮತ್ತು ಅಂಬುಜಾ ಸಿಮೆಂಟ್ ತಲಾ ಶೇಕಡಾ 2 ಕ್ಕಿಂತ ಹೆಚ್ಚು ಏರಿಕೆ ಕಂಡವು. ವಲಯವಾರು ನೋಡುವುದಾದರೆ ಬಿಎಸ್ಇ ಪವರ್ ಸೂಚ್ಯಂಕವು ಶೇಕಡಾ 2.3 ರಷ್ಟು ಏರಿಕೆಯಾಗಿದೆ. ಲೋಹ ಮತ್ತು ಬಂಡವಾಳ ಸರಕು ಸೂಚ್ಯಂಕಗಳು ತಲಾ ಶೇ 1ರಷ್ಟು ಏರಿಕೆ ಕಂಡಿವೆ.
ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ನ ವಿಭಜಿತ ಘಟಕವಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ (ಜೆಎಫ್ಎಸ್) ಷೇರುಗಳು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್ಎಸ್ಇ) 262 ರೂ.ಗೆ ಮತ್ತು ಬಿಎಸ್ಇಯಲ್ಲಿ 265 ರೂ.ಗೆ ಲಿಸ್ಟ್ ಮಾಡಲಾಗಿದೆ. ಲಿಸ್ಟಿಂಗ್ ನಂತರ, ಷೇರುಗಳು ಬಿಎಸ್ಇಯಲ್ಲಿ ಗರಿಷ್ಠ 278.20 ರೂ.ಗೆ ಮತ್ತು ನಂತರ 251.75 ರೂ.ಗಳ ಕನಿಷ್ಠ ಮಟ್ಟವನ್ನು ತಲುಪಿದ್ದವು. ಎನ್ಎಸ್ಇಯಲ್ಲಿ ಇದು ಗರಿಷ್ಠ 262.05 ರೂ ಮತ್ತು ಕನಿಷ್ಠ 248.90 ರೂ. ಆಗಿತ್ತು.
ಇದನ್ನೂ ಓದಿ : 10 ವರ್ಷಗಳಲ್ಲಿ ಸ್ಯಾಮ್ಸಂಗ್ 308 ಕೋಟಿ, ಆ್ಯಪಲ್ 210 ಕೋಟಿ ಮೊಬೈಲ್ ಮಾರಾಟ