ಸಿಯೋಲ್: ದಟ್ಟ ಕಾಡು, ಗುಡ್ಡಗಾಡು ಪ್ರದೇಶ, ತೀರಾ ಹಿಂದುಳಿದ ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಹೇಳತೀರದು. ಇದನ್ನು ಹೋಗಲಾಡಿಸಲು ದಕ್ಷಿಣ ಕೊರಿಯಾದ ಮೊಬೈಲ್ ದೈತ್ಯ ಸ್ಯಾಮ್‌ಸಂಗ್ ತನ್ನ ಮುಂಬರುವ ಗ್ಯಾಲಕ್ಸಿ ಮೊಬೈಲ್ಗಳಲ್ಲಿ ಉಪಗ್ರಹ ಸಂಪರ್ಕ ಅಳವಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದರಿಂದ ನೆಟ್‌ವರ್ಕ್ ಇಲ್ಲದೆಯೂ ಸ್ಯಾಟ್ಲೈಟ್ ಮೂಲಕವೇ ತುರ್ತು ಕರೆ ಮಾಡಬಹುದಾಗಿದೆ.
ಸ್ಯಾಮ್‌ಸಂಗ್ ರೂಪಿಸುತ್ತಿರುವ Galaxy S23 ಸ್ಮಾರ್ಟ್‌ಫೋನ್‌ನಲ್ಲಿ ಈ ವೈಶಿಷ್ಟ್ಯವು ಲಭ್ಯವಿರುತ್ತದೆಯೇ ಎಂಬುದು ಸ್ಪಷ್ಟತೆ ಸಿಕ್ಕಿಲ್ಲವಾದರೂ, ಈ ವಿಧಾನವನ್ನು ಮೊಬೈಲ್ನಲ್ಲಿ ಅಳವಡಿಸಿದರೆ ಉಪಗ್ರಹದ ಸಹಾಯದಿಂದ ಯಾವುದೇ ಸೆಲ್ಯುಲಾರ್ ಕಂಪನಿಯ ಸಿಗ್ನಲ್ ಕವರೇಜ್ ಇಲ್ಲದೆಯೂ ಬಳಕೆದಾರರು ತುರ್ತು ಕರೆಗಳನ್ನು ಮಾಡಬಹುದು. ಇದನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವುಂತಿಲ್ಲ.
ಇನ್ನೊಂದು ಮೊಬೈಲ್ ದೈತ್ಯ ಕಂಪನಿಯಾದ ಆ್ಯಪಲ್ ಐಫೋನ್ 14 ಸರಣಿಯ ಮೊಬೈಲ್ನಲ್ಲಿ ಸ್ಯಾಟಲೈಟ್ ನೆಟ್‌ವರ್ಕ್ ಅನ್ನು ಪರಿಚಯಿಸಿದೆ. ಸದ್ಯಕ್ಕೆ ಇದು ಅಮೆರಿಕ ಮತ್ತು ಕೆನಡಾದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ಕೊನೆಯಲ್ಲಿ ಈ ವಿಧಾನವನ್ನು ವಿಶ್ವದ ಇತರ ದೇಶಗಳಿಗೂ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ ಎಂದು ಹೇಳಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಈ ಎರಡೂ ಕಂಪನಿಗಿಂತಲೂ ಮೊದಲು ಚೀನಾ ಮೂಲದ ಹುವೈ ಮೊಬೈಲ್ ಕಂಪನಿ ತನ್ನ ಮೇಟ್ 50 ಸರಣಿಯ ಮೊಬೈಲ್ನಲ್ಲಿ ಸ್ಯಾಟಲೈಟ್ ನೆಟ್‌ವರ್ಕ್ ಅಳವಡಿಸಿಕೊಂಡಿದೆ. ಚೀನಾದ ಕಂಪನಿಯ ಪ್ರಕಾರ, Mate50 ಮತ್ತು Mate50 Pro ಸ್ಮಾರ್ಟ್‌ಫೋನ್ ಬಳಕೆದಾರರು ಜಾಗತಿಕವಾಗಿ ಬೈದು ಸ್ಯಾಟಲೈಟ್ ನೆಟ್‌ವರ್ಕ್ ಮೂಲಕ ಕಿರು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ಆ್ಯಪಲ್ ಕಂಪನಿಯು iPhone 14 ಮತ್ತು ಭವಿಷ್ಯದ ಐಫೋನ್ ಸರಣಿಗಳಲ್ಲಿ ಗ್ಲೋಬಲ್‌ಸ್ಟಾರ್ ನೆಟ್‌ವರ್ಕ್ ಅನ್ನು ಬಳಸುತ್ತದೆ ಎಂದು ಹೇಳಲಾಗಿದೆ. ಸ್ಯಾಮ್‌ಸಂಗ್ ಯಾವ ಸ್ಯಾಟಲೈಟ್ ಸೇವೆಯನ್ನು ಅಳವಡಿಸುತ್ತದೆ ಎಂಬುದು ಇನ್ನು ಖಚಿತವಾಗಿಲ್ಲ. ಸ್ಯಾಮ್‌ಸಂಗ್ ಗ್ಲೋಬಲ್‌ಸ್ಟಾರ್ ಸ್ಯಾಟಲೈಟ್ ನೆಟ್‌ವರ್ಕ್ ಅನ್ನು ಈ ಬಾರಿ ಬಳಸುತ್ತಿಲ್ಲ ಎಂದು ಹೇಳಲಾಗಿದೆ. ಕಾರಣ ಆ್ಯಪಲ್ ಈಗಾಗಲೇ ತನ್ನ ಪ್ರಸ್ತುತ ಮತ್ತು ಭವಿಷ್ಯದ ನೆಟ್ವರ್ಕ್ಗಾಗಿ ಶೇಕಡಾ 85 ರಷ್ಟು ಹಕ್ಕನ್ನು ಅದು ಪಡೆದುಕೊಂಡಿದೆ.