ನೀವು ಈಗಾಗಲೇ ಖರೀದಿಸಿದ ಅಥವಾ ಖರೀದಿಸಲು ಯೋಚಿಸುತ್ತಿರುವ ವಿಮಾ ಪಾಲಿಸಿಯಿಂದ ನಿಮ್ಮ ಭವಿಷ್ಯ ಸಂಪೂರ್ಣವಾಗಿ ಸುರಕ್ಷಿತವಾಗಲಿದೆ ಎಂಬ ಭಾವನೆ ನಿಮ್ಮಲ್ಲಿರಬಹುದು. ಆದಾಗ್ಯೂ ಈ ಬಗ್ಗೆ ನೀವು ಮತ್ತೊಮ್ಮೆ ಯೋಚಿಸುವುದು ಒಳಿತು.
ವಿಮೆ ಖರೀದಿಸುವ ಮುನ್ನ ಹಣದುಬ್ಬರದ ಪರಿಣಾಮವನ್ನು ನೀವು ಬಹುಶಃ ಪರಿಗಣಿಸಿರಲಿಕ್ಕಿಲ್ಲ. ಭವಿಷ್ಯದ ದಿನಗಳಲ್ಲಿ ಹಣದುಬ್ಬರದ ಕಾರಣದಿಂದ ಜೀವನವೆಚ್ಚವು ದುಬಾರಿಯಾಗುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ನೀವು ವಿಮೆ ಖರೀದಿಸಿದರೆ ನಿಮ್ಮ ಹಣಕಾಸು ಪ್ಲ್ಯಾನಿಂಗ್ ತಲೆಕೆಳಗಾಗಬಹುದು ಹಾಗೂ ವಿಮೆಯ ಪ್ರಾಥಮಿಕ ಉದ್ದೇಶವಾದ ಸುರಕ್ಷೆಯೇ ಇಲ್ಲವಾಗಬಹುದು. ಹೀಗಾಗಿ ಹಣದುಬ್ಬರವನ್ನು ಕಳೆದ ನಂತರವೂ ನಿಮ್ಮ ಜೀವನಕ್ಕೆ ಸಂಪೂರ್ಣ ಸುರಕ್ಷತೆ ನೀಡಬಲ್ಲ ಉಳಿತಾಯ ಯೋಜನೆ ಪಡೆಯುವುದು ಅಗತ್ಯ.
ಹಣದುಬ್ಬರದ ಪರಿಣಾಮ ಎಷ್ಟಿರುತ್ತದೆ?: ಪ್ರಸ್ತುತ ಜಾಗತಿಕವಾಗಿ ಹಣದುಬ್ಬರವು ಸಾರ್ವಕಾಲಿಕ ಅತ್ಯಧಿಕ ಮಟ್ಟದಲ್ಲಿದ್ದು, ಭಾರತದಲ್ಲಿ ದಶಕದ ಅತ್ಯಧಿಕ ಮಟ್ಟದಲ್ಲಿದೆ. 2017ರಲ್ಲಿ ಭಾರತದಲ್ಲಿ ಹಣದುಬ್ಬರ ಶೇ 3.33 ಇದ್ದದ್ದು 5 ವರ್ಷಗಳ ನಂತರ ಏಪ್ರಿಲ್ 2022ಕ್ಕೆ ಇದು ಶೇ 7.79ಕ್ಕೆ ಮುಟ್ಟಿದೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ. ಇದು 8 ವರ್ಷಗಳಲ್ಲಿ ಅತ್ಯಧಿಕ ಹಣದುಬ್ಬರವಾಗಿದೆ. ಅಂಕಿ-ಅಂಶಗಳ ಪ್ರಕಾರ, ಮೇ 2022 ರಲ್ಲಿ ಆಹಾರದ ಬೆಲೆಗಳು ಶೇ 7.84 ಹೆಚ್ಚಾಗಿವೆ. ತರಕಾರಿಗಳಂಥ ದೈನಂದಿನ ಅಗತ್ಯ ವಸ್ತುಗಳ ಬೆಲೆ ಶೇ 18 ಕ್ಕಿಂತ ಹೆಚ್ಚಾಗಿವೆ. ಸಾರಿಗೆ ಮತ್ತು ಸಂವಹನದ ವೆಚ್ಚಗಳು ಸುಮಾರು ಶೇ 9.5, ಬಟ್ಟೆ ಸುಮಾರು ಶೇ 8.5 ಮತ್ತು ಆರೋಗ್ಯ ಸೇವೆಗಳು ಸುಮಾರು ಶೇ 5.5 ರಷ್ಟು ಏರಿಕೆ ಕಂಡಿವೆ.
10 ವರ್ಷಗಳ ಹಿಂದೆ 1000 ರೂಪಾಯಿಗಳಲ್ಲಿ ನೀವು ಸಾಕಷ್ಟು ದಿನಸಿ ಸಾಮಾನುಗಳನ್ನು ಖರೀದಿಸಬಹುದಾಗಿತ್ತು. ಆದರೆ ಇವತ್ತು ಸಾವಿರ ರೂಪಾಯಿ ಯಾವುದಕ್ಕೂ ಸಾಲದಂತಾಗಿದೆ. ಅಂದರೆ ನಿಮ್ಮ ಖರೀದಿಸುವ ಶಕ್ತಿ ದಿನದಿಂದ ದಿನಕ್ಕೆ ಕುಂದುತ್ತಿದೆ. ಹಾಗಾದರೆ ಮುಂದಿನ 20, 30, 40 ವರ್ಷಗಳ ನಂತರ ಏನಾಗಬಹುದೆಂದು ನೀವೇನಾದರೂ ಊಹಿಸಬಲ್ಲಿರಾ?
ಹೀಗಾಗಿ ವಿಮಾ ಪಾಲಿಸಿ ಖರೀದಿಸುವುದು ಅಥವಾ ಉಳಿತಾಯ ಯೋಜನೆಯಲ್ಲಿ ಹಣ ಹೂಡುವುದು ಹೀಗೆ ಭವಿಷ್ಯದ ಸುರಕ್ಷತೆಗಾಗಿ ಹಣಕಾಸು ಯೋಜನೆ ರೂಪಿಸುವ ಮುನ್ನ ಹಣದುಬ್ಬರವನ್ನು ಪರಿಗಣಿಸಿಯೇ ಮುಂದೆ ಸಾಗುವುದು ಒಳಿತು. ಈ ವಿಷಯದಲ್ಲಿ ಹೆಚ್ಚಿನ ತಿಳುವಳಿಕೆ ಇರಲಾರದವರು ಹಣಕಾಸು ತಜ್ಞರಿಂದ ಮಾರ್ಗದರ್ಶನ ಪಡೆದು ಹಣ ಹೂಡಿಕೆ ಮಾಡುವುದು ಒಳಿತು.