ಸ್ಯಾನ್ ಫ್ರಾನ್ಸಿಸ್ಕೋ: ಆರ್ಥಿಕ ಹಿಂಜರಿತದ ಸಾಧ್ಯತೆಯ ಹಿನ್ನೆಲೆಯಲ್ಲಿ ಹಾಲಿಡೇ ಸೀಸನ್ನಲ್ಲಿ ದೊಡ್ಡ ಮೊತ್ತದ ಖರೀದಿಗಳನ್ನು ಮಾಡದಂತೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಗ್ರಾಹಕರು ಮತ್ತು ಉದ್ಯಮಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗ್ರಾಹಕರು ತಮ್ಮ ಹಣವನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ಮತ್ತು ಅನಗತ್ಯ ಖರ್ಚುಗಳನ್ನು ತಪ್ಪಿಸುವಂತೆ ಸಲಹೆ ನೀಡಿದರು. ಆರ್ಥಿಕ ಹಿಂಜರಿತದ ಸಾಧ್ಯತೆ ಇರುವುದರಿಂದ ದುಬಾರಿ ಕಾರುಗಳು ಮತ್ತು ಟೆಲಿವಿಷನ್‌ಗಳಂತಹ ಐಷಾರಾಮಿ ವಸ್ತುಗಳ ಖರೀದಿ ಮಾಡದಂತೆ ಅವರು ಅಮೆರಿಕನ್ನರಿಗೆ ಸಲಹೆ ನೀಡಿದರು.
ಆರ್ಥಿಕ ಸಮಸ್ಯೆಗಳು ಇನ್ನೂ ಗಂಭೀರವಾಗುವ ಸಾಧ್ಯತೆಯ ನಿರೀಕ್ಷೆಯಲ್ಲಿ ಒಂದಿಷ್ಟು ರಿಸ್ಕ್ ಕಡಿಮೆ ಮಾಡಿಕೊಳ್ಳಿ. ಸಣ್ಣ ಮಟ್ಟದ ಅಪಾಯ ಕಡಿಮೆ ಮಾಡಿಕೊಂಡರೆ ಸಾಕು, ಚಿಕ್ಕ ಉದ್ಯಮಗಳಿಗೆ ಅಷ್ಟರಮಟ್ಟಿಗೆ ಸಹಾಯವಾಗಬಹುದು. ಕೆಲ ಸಾಧ್ಯಾಸಾಧ್ಯತೆಗಳ ಮೇಲೆ ನೀವು ನಡೆಯಬೇಕು ಎಂದು ಬೆಜೋಸ್ ಹೇಳಿದ್ದಾರೆ.
ದೊಡ್ಡ ಪರದೆಯ ಟಿವಿಯೊಂದನ್ನು ಖರೀದಿಸಬಯಸುವ ವ್ಯಕ್ತಿ ನೀವಾಗಿದ್ದರೆ, ನೀವು ಒಂದಿಷ್ಟು ಕಾಯುವುದು ಒಳಿತು. ನಿಮ್ಮ ಹಣವನ್ನು ಕಾಯ್ದಿಟ್ಟುಕೊಂಡು ಏನಾಗಲಿದೆ ಎಂದು ಕಾಯಬಹುದು. ಹೊಸ ವಾಹನ, ಫ್ರಿಜ್ ಅಥವಾ ಇನ್ನೇನಾದರೂ ಕೊಳ್ಳುವ ಉದ್ದೇಶವಿದ್ದರೆ ಈ ಮಾತು ಅದಕ್ಕೂ ಅನ್ವಯಿಸುತ್ತದೆ. ಒಟ್ಟಾರೆ ಒಂದಿಷ್ಟು ರಿಸ್ಕ್ ಕಡಿಮೆ ಮಾಡಿ ಎಂದಿದ್ದಾರೆ ಬೆಜೋಸ್.
ತಮ್ಮ 124 ಶತಕೋಟಿ ನಿವ್ವಳ ಮೌಲ್ಯದ ಆಸ್ತಿಯನ್ನು ಹವಾಮಾನ ಬದಲಾವಣೆಯನ್ನು ಎದುರಿಸಲು ಮತ್ತು ಮಾನವೀಯ ಕಾರ್ಯಗಳಿಗಾಗಿ ದಾನ ಮಾಡುವುದಾಗಿ ಅಮೆಜಾನ್‌ನ ಸಂಸ್ಥಾಪಕ ಬೆಜೋಸ್ ಇದೇ ಸಮಯದಲ್ಲಿ ಹೇಳಿದರು.
ಇದನ್ನೂ ಓದಿ: 'ಜನರು ಬಾಹ್ಯಾಕಾಶದಲ್ಲಿ ಜನಿಸುವ, ಭೂಮಿಗೆ ಆಗಾಗ ಭೇಟಿ ನೀಡುವ ದಿನ ಬರುತ್ತೆ' - ಅಮೆಜಾನ್ ಸಂಸ್ಥಾಪಕ